

ತಾಳಿಕೋಟೆ: ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಸೈಯದ್‌ಅಹ್ಮದ್ ಅವರ ಮೇಲೆ ಪುರಸಭೆ ಸದಸ್ಯ ಶರಣಗೌಡ ಪಾಟೀಲ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ತಹಸೀಲ್ದಾರ್ ಅನೀಲಕುಮಾರ ಢವಳಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಮುಖ್ಯಾಧಿಕಾರಿ ಕುಲಕರ್ಣಿ, ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಪೌರಕಾರ್ಮಿಕರು ಮತ್ತು ಅಧಿಕಾರಿ ವರ್ಗದವರು ತಮ್ಮ ಜೀವ ಲೆಕ್ಕಿಸದೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಸೌಜನ್ಯದಿಂದ ಸಲಹೆ ನೀಡುವುದನ್ನು ಬಿಟ್ಟು ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದು ಖಂಡನೀಯ. ಹಲ್ಲೆ ನಡೆಸಿದ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಸಾಮೂಹಿಕವಾಗಿ ಎಲ್ಲ ನೌಕರರು ರಜೆ ಹಾಕಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ವ್ಯವಸ್ಥಾಪಕ ಎಚ್.ಎ. ಢಾಲಾಯತ್, ಆರ್. ವೈ. ನಾರಾಯಣ, ಬಿ.ಜಿ. ನಾರಾಯಣಕರ, ಎನ್.ಎಸ್. ಪಾಟೀಲ, ಶ್ರೀಪಾದ ಜೋಶಿ, ಡಿ.ಬಿ. ಜಾನ್ವೇಕರ, ಎಸ್.ವಿ. ಮಠ, ಆನಂದ ನಾಯಕ, ಐ. ಎಚ್.ಮಕಾಂದಾರ, ಸಿದ್ದಲಿಂಗ ಪಾಟೀಲ, ಆರೋಗ್ಯ ಅಧಿಕಾರಿಗಳಾದ ಶಿವು ಜುಮನಾಳ, ಬಸವರಾಜ ಖಾಜಿಬೀಳಗಿ, ಎಸ್.ಎ. ಘತ್ತರಗಿ, ಶಂಕ್ರಗೌಡ ಬಿರಾದಾರ, ಪೌರಕಾರ್ಮಿಕರು ಉಪಸ್ಥಿತರಿದ್ದರು.