

ಸಿಂದಗಿ: ನಮ್ಮ ನಾಡಿನ ಹೆಸರಾಂತ ಸಂಶೋಧಕ ದಿ. ಡಾ. ಎಂ.ಎಂ. ಕಲಬುರ್ಗಿ ಫೌಂಡೇಷನ್ ವತಿಯಿಂದ ಪ್ರಕಟಿಸುವ 2022ನೇ ಸಾಲಿನ ಕೃತಿಗಳ ಪ್ರಕಟಣೆಗೆ ನಾನು ಆರ್ಥಿಕವಾಗಿ ಸಹಕಾರ ನೀಡುವೆ ಎಂದು ಶಾಸಕ ರಮೇಶ ಭೂಸನೂರ ವಾಗ್ದಾನ ಮಾಡಿದರು.ಪಟ್ಟಣದಲ್ಲಿ ನಡೆದ ದಿ. ಡಾ. ಎಂ.ಎಂ. ಕಲಬುರ್ಗಿ ಫೌಂಡೇಷನ್ ಉದ್ಘಾಟನೆ ಹಾಗೂ ಅವರ ಸಂಪಾದಿತ ಕೃತಿ ವಚನವರ್ಷ ಗ್ರಂಥದ ಐದನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ, ಕಲಬುರ್ಗಿ ಗುರುಗಳು ಕಂಡ ಕನಸು ನನಸು ಮಾಡಲು ಇಡೀ ಕುಟುಂಬ ಶ್ರಮಿಸುತ್ತಿದೆ. ಈ ಕುಟುಂಬದ ಮುಂದಾಳತ್ವಕ್ಕೆ ಕ್ಷೇತ್ರದ ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಡಾ.ಎಂ.ಎಂ. ಕಲಬುರ್ಗಿ ಗುರುಗಳ ಸಂಶೋಧನಾ ಸಾಹಿತ್ಯ ಗಮನಿಸಿ ಸರ್ಕಾರ ಅವರಿಗೆ ಪಂಪ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿ ಜತೆಗೆ ನೀಡುವ ನಗದನ್ನು ಸರ್ಕಾರಕ್ಕೆ ಮರಳಿಸಿ ಪಂಪನ ಹುಟ್ಟು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲು ಸೂಚಿಸಿದ್ದು ಅವರ ಸರಳತೆಗೆ ಸಾಕ್ಷಿ ಎಂದರು.
ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದಲ್ಲಿ ರಾಷ್ಟ್ರೀಯ ಸ್ಮಾರಕ ರಚಿಸಲು ಒತ್ತಾಯಿಸಿ ಶಾಸಕ ಹಾಗೂ ಎಂಎಲ್‌ಸಿಗೆ ಕುಟುಂಬದವರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ಈಗಾಗಲೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಚಿವ ಸೋಮಣ್ಣ ಅವರು ಯರಗಲ್ಲ ಬಿ.ಕೆ. ಗ್ರಾಮದ ಅವರ ಮನೆಯನ್ನೇ ಸ್ಮಾರಕವಾಗಿಸುವ ಬಗ್ಗೆ ಚರ್ಚೆ ನಡೆಸಿದ್ದು, ಅಲ್ಲದೆ, ಧಾರವಾಡದಲ್ಲೂ ಸ್ಮಾರಕ ಬೇಕೆಂಬ ಬೇಡಿಕೆಯನ್ನು ನಾವು ಸರ್ಕಾರದ ಮುಂದೆ ಪ್ರಸ್ತಾಪಿಸಿ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ವಿಜಯಪುರದ ಪ್ರಾಚಾರ್ಯ ಡಾ. ಸಂಗಮೇಶ ಮೇತ್ರಿ ಅವರು ದಿ. ಕಲಬುರ್ಗಿ ಅವರ ಸಂಪಾದಿತ ವಚನವರ್ಷ ಗ್ರಂಥದ ಕುರಿತು ಮಾತನಾಡಿದರು.
ವಚನವರ್ಷ ಗ್ರಂಥದ ಪ್ರಕಟಣೆ ದಾನಿಗಳಾದ ಶಿವಪ್ಪ ಗವಸಾನೆ ದಂಪತಿಯನ್ನು ಫೌಂಡೇಷನ್ ವತಿಯಿಂದ ಗೌರವಿಸಲಾಯಿತು.
ಗ್ರಾಮದ ಹಿರಿಯಮಠದ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಫೌಂಡೇಷನ್ ಸಲಹೆಗಾರ ಡಾ.ಎಂ.ಎಂ. ಪಡಶೆಟ್ಟಿ, ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ ಇತರರಿದ್ದರು.