ಕಾಲುವೆಗೆ ಶೀಘ್ರ ನೀರು ಹರಿಸಿ

SND-17-2
Published on

ಸಿಂದಗಿ: ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯಡಿ ಸಿಂದಗಿ ಕ್ಷೇತ್ರ ವ್ಯಾಪ್ತಿಯ ಕಾಲುವೆಗೆ ಜು.30 ರೊಳಗೆ ನೀರು ಹರಿಸುವಂತೆ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಆಗ್ರಹಿಸಿದರು.ಕೆಂಭಾವಿಯ ಗುತ್ತಿ ಬಸವಣ್ಣ ಏತ ನೀರಾವರಿಯ ಜಾಕ್‌ವೆಲ್‌ಗೆ ಭಾನುವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.

ರೈತರ ಜಮೀನುಗಳಿಗೆ ಕಾಲುವೆ ನೀರು ಅಗತ್ಯವಿರುವಾಗಲೇ ಅಲ್ಲಿನ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ನಿರ್ಲಕ್ಷೃ ತೋರಿದ್ದಾರೆ. ಅಲ್ಲದೆ ದುರಸ್ಥಿಯಲ್ಲಿದ್ದ ವಿದ್ಯುತ್ ಮೋಟರ್‌ಗಳನ್ನು ಕಾಲಕಾಲಕ್ಕೆ ರಿಪೇರಿ ಮಾಡಿಸದೆ ಇರುವುದರಿಂದ ರೈತರು ಬೆಳೆಗೆ ನೀರಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕ ರಮೇಶ ಭೂಸನೂರ ಅವರು ಪಂಪ್‌ಹೌಸ್‌ನ ಎಂಟು ಮೋಟರ್‌ಗಳಿಗೂ ಹೊಸ ಟೆಂಡರ್ ಆಗಿದೆ ಎಂದು ಹೇಳಿದ್ದರು. ತಾಂಬಾ ಭಾಗದ ರೈತರ ಧರಣಿಗೆ ಹೋಗಿ ಜು.15ರೊಳಗೆ ಮೂರು ವಿದ್ಯುತ್ ಮೋಟರ್ ಸೇರಿದಂತೆ ಜು.30 ರೊಳಗೆ ಎಂಟು ಮೋಟರ್ ಕಾರ್ಯಾರಂಭ ಮಾಡುವ ಮೂಲಕ ವ್ಯಾಪ್ತಿಯ ಕಾಲುವೆಗೆ ನೀರು ಹರಿಯುತ್ತದೆ ಎಂದು ಹೇಳಿದ್ದರು. ಆದರೆ ಇಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಭೇಟಿ ಮಾಡಿದಾಗ, ಜೂ.4 ರಂದು ಹೊಸ ಮೋಟರ್ ಅಳವಡಿಕೆಯ ವರ್ಕ್ ಆರ್ಡರ್ ನೀಡಿದ್ದಾರೆ. ಇಲೆಕ್ಟ್ರಿಕಲ್, ಪಂಪ್‌ವರ್ಕ್, ಮೋಟರ್ ಕೆಲಸ ಕನಿಷ್ಟವೆಂದರೂ ಅಗಸ್ಟ್ ತಿಂಗಳ ಕೊನೆಯವರೆಗೂ ನಡೆಯಲಿದೆ. ನಂತರದಲ್ಲಿ ಕಾಲುವೆಗೆ ಸಮರ್ಪಕ ನೀರು ಹರಿಯುತ್ತದೆ ಎಂದು ಹೇಳುತ್ತಿರುವುದು ಅಚ್ಚರಿಯುಂಟು ಮಾಡಿದೆ ಎಂದರು.

ಸುಳ್ಳು ಭರವಸೆ ಮೂಲಕ ರೈತರನ್ನು ವಂಚಿಸುತ್ತಿರುವ ಶಾಸಕರು ಹಾಗೂ ಸಚಿವರು ಜು.30ರೊಳಗೆ ರೈತರಿಗೆ ಕೊಟ್ಟ ಮಾತಿನಂತೆ ಜವಾಬ್ದಾರಿಯುತವಾಗಿ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದರೆ ಕಾಲುವೆ ವ್ಯಾಪ್ತಿಯ ಎಲ್ಲ ರೈತರನ್ನು ಒಗ್ಗೂಡಿಸಿ, ಅಗಸ್ಟ್ ಮೊದಲ ವಾರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಚ್.ಬಿ.ಚಿಂಚೊಳ್ಳಿ, ರವಿರಾಜ ದೇವರಮನಿ, ಗುರಣ್ಣಗೌಡ ಬಿರಾದಾರ (ನಾಗಾವಿ), ಶಿವಣ್ಣ ಕೊಟಾರಗಸ್ತಿ, ಖಾದಿರ ಬಂಕಲಗಿ, ರಾಮಚಂದ್ರ ರಾಠೋಡ, ಸಲಿಂ ಜುಮನಾಳ, ಸಂಗನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಹಾದೇವ ರಾಠೋಡ, ಒಡೆಯರ ಮುತ್ಯಾ, ಅಜೀಜ್ ಬಾಗವಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net