ಸಿಂದಗಿ ತಾಲೂಕಿನೆಲ್ಲೆಡೆ ಶಾಂತಿಯುತ ಮತದಾನ

Snd-27-01-c
Published on

ಸಿಂದಗಿ: ತಾಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ 191 ಮತಗಟ್ಟೆಗಳಲ್ಲಿ ಕೆಲವು ಗ್ರಾಮಗಳ ಬೂತ್‌ಗಳಲ್ಲಿ ಮುಂದೆಯೇ ಅಭ್ಯರ್ಥಿಗಳು ಹಾಗೂ ಏಜೆಂಟರ ನಡುವೆ ಮಾತಿನ ಚಕಮಕಿ ನಡೆದರೆ, ಇನ್ನು ಕೆಲವೆಡೆ ಮತಗಟ್ಟೆ ಏಜೆಂಟರೆ ಮತದಾರರಿಗೆ ಈ ಗುರುತಿಗೆ ಮತ ಹಾಕುವಂತೆ ಒತ್ತಾಯಿಸುತ್ತಿರುವುದು ಕಂಡು ಬಂತು. ಒಟ್ಟಾರೆ ತಾಲೂಕಿನೆಲ್ಲೆಡೆ ಭಾನುವಾರ ಶಾಂತಿಯುತ ಮತದಾನವಾಯಿತು.

ಕೆಲ ಹಳ್ಳಿಗಳಲ್ಲಿ ಬೆಳಗ್ಗೆಯೇ ಬಿರುಸುಗೊಂಡ ಮತದಾನ, ಮಧ್ಯಾಹ್ನ ನಿರಸವಾಗಿ, ಮತ್ತೆ ಸಂಜೆ ಮತದಾನ ಪ್ರಮಾಣದಲ್ಲಿ ಏರಿಕೆಯಾಯಿತು. ಬಹುತೇಕ ಕಡೆ ಮಹಿಳೆಯರೇ ಹೆಚ್ಚಾಗಿ ಮತಚಲಾಯಿಸಲು ಸರದಿಯಲ್ಲಿದ್ದರು.

ಗೋಲಗೇರಿ ಗ್ರಾಮದ 3ನೇ ವಾರ್ಡಿನ 69(ಎ)ನೇ ಮತಗಟ್ಟೆಯಲ್ಲಿ ಶೋಭಾ ಮಲ್ಲಪ್ಪ ಚಲವಾದಿ ಮತದಾನಕ್ಕೆ ಮತಗಟ್ಟೆಗೆ ಬಂದಾಗ, ಕ್ರಮ ಸಂಖ್ಯೆ 915ರಲ್ಲಾಗಲೇ ಮತ ಚಲಾವಣೆಗೊಂಡಿತ್ತು. ನಾನು ಈಗ ಬಂದಿದ್ದು, ಮತ ಚಲಾಯಿಸಿಲ್ಲ. ನನಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದಿದ್ದಾಗ ಮತಗಟ್ಟೆಯಿಂದ ಹೊರನಡೆದರು. ಗೋಲಗೇರಿಯ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಚಿಹ್ನೆ ಗುರುತಿನ ಚೀಟಿಯನ್ನು ಮತದಾರರ ಕೈಯಲ್ಲಿ ನೀಡುತ್ತಿರುವುದು ಕಂಡು ಬಂತು. ಇದೇ ಮತಗಟ್ಟೆಯ ಪಕ್ಕದ ಬೂತ್ 69ರಲ್ಲಿ ಮತದಾನಕ್ಕೆ ಸರತಿ ನಿಂತವರಲ್ಲಿ ಬೂತ್ ಏಜೆಂಟನೊಬ್ಬ ಈ ಚಿಹ್ನೆಗೆ ಮತಹಾಕಿ ಎಂದು ಪೋಲೀಸರ ಎದುರಲ್ಲಿಯೇ ಹೇಳುತ್ತಿರುವುದನ್ನು ಗಮನಿಸಿದ ಮತದಾರನೊಬ್ಬ ಪೊಲೀಸ್ ಮತ್ತು ಬೂತ್ ಏಜೆಂಟರೊಂದಿಗೆ ಮಾತಿನ ಚಕಮಕಿ ನಡೆಸಿ ಇಂತಹದ್ದಕ್ಕೆಲ್ಲ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದನು.

ಇದೇ ಗ್ರಾಪಂ ವ್ಯಾಪ್ತಿಯ, ಢವಳಾರದಲ್ಲಿನ ಬೂತ್‌ನಲ್ಲಿಯೇ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ಡಂಬಳದ 73ನೇ ಬೂತ್‌ನಲ್ಲಿ ಶೀಲವತಿ ಹಿರೇಮಠ ತಮ್ಮ ಮತ ಚಲಾಯಿಸಲು ಬೂತ್‌ಗೆ ಬಂದಾಗ ಏಜೆಂಟರೊಬ್ಬರು ಮತ ಹಾಕಲು ಅವಕಾಶ ಕೊಡದಂತೆ ಬೂತ್ ಅಧಿಕಾರಿಗೆ ತಿಳಿಸಿದಾಗ, ಮಹಿಳೆ ನನ್ನ ಹೆಸರು ಮತಪಟ್ಟಿಯಲ್ಲಿದ್ದರೂ ನನಗೆ ಅವಕಾಶ ಹೇಗೆ ಕೊಡಲ್ಲ? ಎಂದು ವಾದಕ್ಕಿಳಿದರು. ಆಗ ಬೂತ್ ಅಧಿಕಾರಿ ಅವರ ಹೆಸರು ಮತ್ತು ಮತ ಚಲಾವಣೆಗೆ ತಂದಿದ್ದ ಮತಚೀಟಿ ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡಿದರು.

ಗುಬ್ಬೇವಾಡ ಗ್ರಾಪಂ 75(ಎ)ನೇ ಮತಗಟ್ಟೆಯಲ್ಲಿ ಮತದಾರರು ಪರಸ್ಪರ ಅಂತರ ಪಾಲಿಸದಿದ್ದರೂ ಸ್ಥಳದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿ ತಮಗೆ ಸಂಬಂಧವಿಲ್ಲದಂತೆ ಹರಟೆ ಹೊಡೆಯುತ್ತಿದ್ದರು. ಬೂತ್‌ನಲ್ಲಿ ಇದೇ ಗುರುತಿಗೆ ಮತ ಹಾಕುವಂತೆ ಹೇಳುತ್ತಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಆವರಣದಲ್ಲಿದ್ದವರನ್ನೆಲ್ಲ ಹೊರ ಹಾಕಿದರು.

ಗೋಲಗೇರಿ ಗ್ರಾಮ ವ್ಯಾಪ್ತಿಯಿಂದ ಅನ್ಯ ರಾಜ್ಯ ಮತ್ತು ಜಿಲ್ಲೆಗಳಿಗೆ ಗುಳೆ ಹೋಗಿದ್ದ ಹತ್ತಾರು ಕುಟುಂಬಗಳನ್ನು ಮತದಾನಕ್ಕಾಗಿ ಮತಗಟ್ಟೆಗೆ ವಾಹನದಲ್ಲಿ ಕರೆತಂದರು. ತಾಲೂಕಿನ ಬಹುತೇಕ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮತದಾರರನ್ನು ವಾಹನಗಳಲ್ಲಿ ಮತಗಟ್ಟೆಗೆ ತಂದು ಮತ ಚಲಾಯಿಸಿದ ನಂತರ ಮನೆವರೆಗೆ ಸಾಗಿಸುತ್ತಿರುವುದು ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net