ಸಿಂದಗಿ-ಗೋಲಗೇರಿ ಮಾರ್ಗದ ಅದ್ವಾನ, ನಿತ್ಯ ವಾಹನ ಸವಾರರಿಂದ ಹಿಡಿ ಶಾಪ, ಹದಗೆಟ್ಟ ರಸ್ತೆ-ಸಾರ್ವಜನಿಕರು ಹೈರಾಣ

SINDAGI GOLAGERI ROAD
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ರಸ್ತೆಯ ದುಃಸ್ಥಿತಿ.
Published on

ವಿಜಯಪುರ: ಹದಗೆಟ್ಟ ರಸ್ತೆಗಳಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಇರುವುದು ನಾಚಿಕೆಗೇಡಿನ ಸಂಗತಿ.

ಸಿಂದಗಿಯಿಂದ ಗೋಲಗೇರಿ ಹೋಗುವ ಮಾರ್ಗ ಸಂಪೂರ್ಣವಾಗಿ ಹದಗಟ್ಟಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಗುಂಡಿಗಳು ಏರಿಳತದಲ್ಲಿ ಪೈಪೋಟಿಗಿಳಿದಿವೆ. ಸುಗಮ ಸಂಚಾರಕ್ಕೆ ಸಂಚಕಾರ ಒದಗಿಸುವೆ. ಪ್ರಯಾಣಿಕರ ತಾಳ್ಮೆ, ಸಹನೆ ಪರೀಕ್ಷಿಸುತ್ತಿವೆ. ನಿತ್ಯ ಹಿಡಿ ಶಾಪ ಹಾಕುತ್ತಲೇ ಜನ ಪ್ರಯಾಣ ಮುಂದುವರಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸಿಂದಗಿಯಿಂದ ಅಸಂತಾಪುರಕ್ಕೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ ಹೊಡೆದು ಪ್ರಯಾಣಿಕರು ಗಾಯಗೊಂಡಿದ್ದಾರೆ. ನಿತ್ಯ ನೂರಾರು ವಾಹನಗಳು ಏಳು ಬೀಳಿನೊಂದಿಗೆ ಸಂಚರಿಸುತ್ತಿವೆ. ಆದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವುದು ವ್ಯವಸ್ಥೆಯ ದುರಂತವೇ ಸರಿ.

ರಾತ್ರಿ ಬೈಕ್, ಟಂಟಂ, ಕ್ರೂಸರ್‌ನಂಥ ಸಣ್ಣ-ಪುಟ್ಟ ವಾಹನಗಳು ಅಪಘಾತಕ್ಕೀಡಾಗುತ್ತಲೇ ಇವೆ. ಮಳೆ ಬಂದರಂತೂ ಈ ರಸ್ತೆ ನರಕಸದೃಶವಾಗಿ ಕಂಗೊಳಿಸುತ್ತದೆ. ಕಲುಷಿತ ನೀರು ಗುಂಡಿಗಳಲ್ಲಿ ತುಂಬಿಕೊಂಡು ರಸ್ತೆ ಯಾವುದು ಮತ್ತು ಗುಂಡಿ ಯಾವುದು ಎಂಬುದನ್ನು ತಿಳಿಯದಂತಾಗುತ್ತದೆ. ಹೀಗಾಗಿ ಬೈಕ್‌ಗಳು ಜಾರುತ್ತಿದ್ದು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ರಸ್ತೆ ಮಧ್ಯದಲ್ಲಿರುವ ಒಂದೊಂದು ಗುಂಡಿಯೂ ನರಕದ ದ್ವಾರಬಾಗಿಲಿನಂತೆ ಭಾಸವಾಗುತ್ತಿವೆ. ಅಧಿಕಾರಿಗಳಾಗಲಿ, ಪ್ರತಿನಿಧಿಗಳಾಗಲಿ ಸ್ಪಂದನೆ ನೀಡದ ಕಾರಣ ಜನರು ಶಾಪ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಲಾಗದ ಸ್ಥಿತಿ ಇದೆ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೇ ಹೋದರೆ ಸಂಭವನೀಯ ಪ್ರಾಣ ಹಾನಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮದ ಕಲ್ಲನಗೌಡ ಪಾಟೀಲ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net