ಬಂಜಾರರನ್ನು ಎಸ್‌ಸಿಗೆ ಸೇರಿಸಿದ್ದು ಕಾಂಗ್ರೆಸ್

SND 25-01
Published on

ಸಿಂದಗಿ: ದಿ. ಕೆ.ಟಿ. ರಾಠೋಡ ಅವರ ಹೋರಾಟದ ಪ್ರತಿಲವಾಗಿ ಬಂಜಾರ ಸಮುದಾಯವನ್ನು ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ ಎಸ್‌ಸಿಗೆ ಸೇರಿಸಿದ್ದು ಕಾಂಗ್ರೆಸ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಂಜಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ನಿಮ್ಮ ಸಮುದಾಯವನ್ನು ಕನಿಷ್ಠ ಮಟ್ಟಕ್ಕೆ ಕಾಣುತ್ತಿದೆ. ನಿಮಗೆ ಮೀಸಲಾತಿ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಎಲ್ಲರೂ ಬೆಂಬಲಿಸಿ. 2023ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಶಿಸಿ ಹೋಗುತ್ತಿರುವ ಬಂಜಾರ ಸಂಸ್ಕೃತಿ ಉಳಿವಿಗೆ ಹಾಗೂ ಬೆಳವಣಿಗೆಗೆ 100 ಕೋಟಿ ರೂ. ಮೀಸಲಿಡುವುದಾಗಿ ಭರವಸೆ ನೀಡಿದರು.

ನನ್ನ ಅಧಿಕಾರ ಅವಧಿಯಲ್ಲಿ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ 200 ಕೋಟಿ ರೂ. ನೀಡಿದ್ದೇವು. ಆದರೆ, ಬಿಜೆಪಿ ಸರ್ಕಾರ ಪ್ರಸ್ತುತ ನಿಗಮಕ್ಕೆ 20 ಕೋಟಿ ರೂ. ನೀಡಿದೆ. 2023ರ ನಮ್ಮ ಸರ್ಕಾರದಲ್ಲಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಡುವುದಾಗಿ ಭರವಸೆ ನೀಡಿದರು.

ಕುಲಗುರು ಶ್ರೀ ಸಂತ ಸೇವಾಲಾಲ ಮಹಾರಾಜರ ಜಯಂತಿ ಆರಂಭಿಸಿದವರು ನಾವು. ಅವರು ಹುಟ್ಟಿದ ಸ್ಥಳ ಸೋರಗೊಂಡನಕೊಪ್ಪ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಂಜಾರ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು. ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಆಯ್ಕೆ ಮಾಡಲು ಶ್ರಮವಹಿಸಿ ಎಂದು ಮನವಿ ಮಾಡಿದರು.

ಶಾಸಕ ಶಿವಾನಂದ ಪಾಟೀಲ, ಈಶ್ವರ ಖಂಡ್ರೆ ಮಾತನಾಡಿ, ಬಂಜಾರ ಸಮುದಾಯ ಕಾಂಗ್ರೆಸ್ ಬೆನ್ನೆಲಬು. ಈ ಸಮುದಾಯ ನಿರಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತ ಬಂದಿದೆ. ಸಿಂದಗಿ ಚುನಾವಣೆಯಲ್ಲಿ ಬಂಜಾರ ಸಮುದಾಯ ಕೈಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕ ಜಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಎಸ್.ಎಂ. ಪಾಟೀಲ ಗಣಿಹಾರ, ಕಾಂತಾ ನಾಯಕ, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೀಮಾ ನಾಯಕ, ಮಾಜಿ ಶಾಸಕ ಅಶೋಕ ಶಾಬಾದಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ಕೊಳ್ಳೂರ, ಸೋಮು ರಾಠೋಡ, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಎಂ.ಪಿ. ರಾಠೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net