

ಸಿಂದಗಿ: ಜು.17ರಂದು ಸಿಂದಗಿ ಪಟ್ಟಣಕ್ಕೆ ಪ್ರಪ್ರಥಮವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಪರಿಶಿಷ್ಟ ಜಾತಿ, ನೇಕಾರ ವರ್ಗ ಮತ್ತು ಬಂಜಾರ ಸಮುದಾಯಗಳ ಜತೆಗೆ ಅವರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಕುರಿತು ಮುಕ್ತ ಸಂವಾದ ನಡೆಸಲಿದ್ದಾರೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜು. 17ರಂದು ಬೆಳಗ್ಗೆ 11 ಗಂಟೆಗೆ ಮಾಂಗಲ್ಯ ಭವನದಲ್ಲಿ ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಆಂದೋಲನ ಪಕ್ಷವಾಗಿರುವ ಕಾಂಗ್ರೆಸ್ ಇದೀಗ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು, ಆಯಾ ಸಮುದಾಯಗಳನ್ನು ನೇರವಾಗಿ ಭೇಟಿ ಮಾಡಿ, ಅವರ ಕಷ್ಟ, ಸಂಕಷ್ಟಗಳನ್ನು ಆಲಿಸಿ ಅರಿತು ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಹೊಸ ಹೆಜ್ಜೆ ಮೂಡಿಸುತ್ತ, ಚಾರಿತ್ರಿಕ ನಿರ್ಧಾರ ಕೈಗೊಂಡು ರಾಜ್ಯದಲ್ಲಿನ ಎಲ್ಲ ಜಾತಿ ವರ್ಗಗಳ ನೆರವಿಗೆ ನಿಲ್ಲುವ ಸಭೆಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದರು.
ಬಿಜೆಪಿ ನಗರಸಭೆ ಸದಸ್ಯ ರವೀಂದ್ರ ಲೋಣಿ, ಪಕ್ಷದ ಮೇಲೆ ಬಾಲಿಶತನದ ಆರೋಪಗಳನ್ನು ಮಾಡಿದ್ದನ್ನು ಖಂಡಿಸಿದರು. ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ, ಮಾಡಿದ ಜಿಲ್ಲೆಯ ಅಭಿವೃದ್ಧಿಯ ಅರಿವಿಲ್ಲ. ಜಿಲ್ಲೆಯಲ್ಲಿನ ನೀರಾವರಿ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಸರ್ಕಾರ 16 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಅಲ್ಲದೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಟಿ. ಸುಣಗಾರ ಮಾತನಾಡಿ, ಬಿಜೆಪಿ ದಲಿತ ಹಾಗೂ ಹಿಂದುಳಿದ ಪರವಾಗಿಲ್ಲ. ಅದು ಜಾತಿಯಾಧಾರಿತ ಪಕ್ಷವಾಗಿ ನಮ್ಮನ್ನು ಆಳುತ್ತಿದೆ. ಜೆಡಿಎಸ್ ರಾಜ್ಯದಲ್ಲಿ ನಿರ್ನಾಮವಾಗಿದೆ. ಕಾಂಗ್ರೆಸ್ ಪಕ್ಷ ಕಟ್ಟಿದ ಹಿರಿಯರ ಭಾವಚಿತ್ರಗಳ ಕೆಳಗೆ ನಾವು ಬೆಳೆಯಬೇಕಿದೆ ಎಂದರು.
ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿದ ಸದಸ್ಯರ ಕುರಿತು ಪಕ್ಷದ ಮುಖಂಡರು ರಕ್ಷಣಾತಂತ್ರ ಅನುಸರಿಸುತ್ತಿರುವ ಹಾಗೂ ಹೋರಾಟ ನಡೆಸುವ ಬಗ್ಗೆ ಪುರಸಭೆಯ ಏಳು ಸದಸ್ಯರ ಆರೋಪದ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸುಣಗಾರ ಅವರು, ಪಕ್ಷದಿಂದ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಈ ಕುರಿತು ಜಿಲ್ಲಾಧ್ಯಕ್ಷರು ಉತ್ತರಿಸುತ್ತಾರೆ ಎಂದು ಆಲಗೂರರತ್ತ ಬೊಟ್ಟು ಮಾಡಿ ಸುಮ್ಮನೆ ಕುಳಿತರು.
ಆಗ ಆಲಗೂರರು, ನಮ್ಮ ಮತ್ತು ಪಕ್ಷದ ಮೃದು ಧೋರಣೆ ಈ ಪ್ರಕರಣದಲ್ಲಿಲ್ಲ. ಈಗಾಗಲೇ ಈ ವಿಷಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಎರಡೂ ಕಡೆಯಿಂದ ವಕೀಲರು ತಮ್ಮ ತಮ್ಮ ವಾದಗಳನ್ನು ಮಂಡಿಸಿದ್ದು, ನ್ಯಾಯಾಲಯ ಅಂತಿಮ ಆದೇಶ ಮಾಡಬೇಕಿದೆ ಎಂದು ಉತ್ತರಿಸಿದರು.
ಬ್ಲಾಕ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಶಾರದಾ ಬಟಗೇರಿ, ಮುಸ್ತಾಕ ಮುಲ್ಲಾ, ಮಹಿಬೂಬ ತಾಂಬೋಳಿ, ರಾಜು ಕೂಚಬಾಳ, ವೈ.ಸಿ. ಮಯೂರ, ಎಂ.ಎ. ಖತೀಬ, ಪಕ್ಷದ ಜಿಲ್ಲಾ ಹಾಗೂ ತಾಲೂಕು ಮುಖಂಡರಿದ್ದರು.