

ಸಿಂದಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಜೆಪಿಯ ಅಭಿವೃದ್ಧಿಪರವಾದ ಸಂಕಲ್ಪಗಳನ್ನು ಈಡೇರಿಸಲು ಪಣ ತೊಟ್ಟಿವೆ ಎಂದು ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ) ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಭಾನುವಾರ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರುವ ಬಿಜೆಪಿ ಸಾಧನೆಯನ್ನು ಯುವ ಮೋರ್ಚಾ ಕಾರ್ಯಕರ್ತರು ಪ್ರತಿ ಮನೆ-ಮನೆಗೆ ಮುಟ್ಟಿಸುವ ಜವಾಬ್ದಾರಿ ಕೆಲಸದ ಜತೆಗೆ ಮುಂಬರುವ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಕಾರ್ಯ ಮಾಡಬೇಕು. ಇದೀಗ ಉಪಚುನಾವಣೆ ಬಂದಿದೆ. ಪಕ್ಷದ ಸಾಧನೆಗಳನ್ನು ಮತಕ್ಷೇತ್ರದ ಪ್ರತಿ ಮನೆ ಮತ್ತು ವ್ಯಕ್ತಿಗೆ ಮುಟ್ಟಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಸಿದ್ಧಾಂತ ಒಪ್ಪಿಕೊಂಡ ಸಾಮಾನ್ಯ ಕಾರ್ಯಕರ್ತನೇ ಪಕ್ಷದ ಜೀವಾಳ. ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ರಣರಂಗದ ರೂವಾರಿಗಳು. ಮುಂದಿನ ಉಪಚುನಾವಣೆಯನ್ನು ಸವಾಲಾಗಿ ಎದುರಿಸೋಣ, ಪ್ರತಿ ಮನೆಗೆ ಬಿಜೆಪಿ ಅಭಿವೃದ್ಧಿಯನ್ನು ಪಸರಿಸೋಣ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಪಕ್ಷದಲ್ಲಿ ಒಳ್ಳೆಯ ನಾಯಕತ್ವವಿದೆ. ಎಲ್ಲೆಡೆ ಪಕ್ಷದ ಬಗ್ಗೆ ಹೆಮ್ಮೆಯಿದೆ. ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
ಉಪಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಸಿಗಲಿ, ಯಾರೇ ಪಕ್ಷದ ಅಭ್ಯರ್ಥಿಗಳಾಗಲಿ ಅವರನ್ನು ಗೆಲ್ಲಿಸೋಣ ಎಂದರು.
ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದ ಮೂಲಕ ಸಭೆಯ ವೇದಿಕೆವರೆಗೂ ಬೈಕ್ ರ‌್ಯಾಲಿ ನಡೆಸಿದರು. ಬಿಜೆಪಿ ಮುಖಂಡ ಪ್ರಕಾಶ ಅಕ್ಕಲಕೋಟ, ಶಿವರುದ್ರ ಬಾಗಲಕೋಟ, ವಿವೇಕಾನಂದ ರಡ್ಡಿ, ರಾಜಕುಮಾರ ಸಗಾಯಿ, ಈರಣ್ಣ ರಾವೂರ, ಅಶೋಕ ರಾಠೋಡ, ಕಾಂತು ಶಿಂಧೆ, ಶಿಲ್ಪಾ ಕುದರಗೊಂಡ, ಬಿ.ಎಚ್. ಬಿರಾದಾರ, ಮಲ್ಲು ಬಗಲಿ ಮತ್ತಿತರರಿದ್ದರು.
ಕಾಂತು ಸಿಂಗೆ ನಿರೂಪಿಸಿದರು. ಸಿದ್ರಾಮ ಆನಗೊಂಡ ಸ್ವಾಗತಿಸಿದರು. ಅಶೋಕ ರಾಠೋಡ ವಂದಿಸಿದರು. ಗುರು ತಳವಾರ, ಭೋಜರಾಜ ದೇಸಾಯಿ, ಶಿವಾನಂದ ಆಲಮೇಲ, ದೇವಿಂದ್ರ ಮನಗೂಳಿ, ರಾಜು ಗೌಂಡಿ, ಎಸ್.ಆರ್. ಪಾಟೀಲ, ಅರವಿಂದ ಹನಗಲಿ, ಅಡಿವೆಪ್ಪ ಅಡವಿ, ಈರಣ್ಣ ಭಾಸಗಿ, ವಿಠ್ಠಲ ನಾಯ್ಕೋಡಿ ಮತ್ತಿತರರು ಪಾಲ್ಗೊಂಡಿದ್ದರು.