

ಸಿಂದಗಿ: ಸಹಾಯ ಮಾಡಿ ಎಂದರೆ ಯಾರೂ ಮುಂದೆ ಬರೋದಿಲ್ಲ. ಆದರೆ, ಧರ್ಮಸ್ಥಳ ಸೇವಾ ಸಂಸ್ಥೆಯು ಬಡ ಗ್ರಾಮೀಣ ಮಕ್ಕಳ ತಂತ್ರಜ್ಞಾನದ ಶಿಕ್ಷಣಕ್ಕೆ ಕಾಳಜಿ ತೋರುವ ಮೂಲಕ ಮಾನವೀಯ ಕಾರ್ಯವನ್ನು ಮಾಡುತ್ತಿದ್ದು, ಇಡೀ ಸಮಾಜವೇ ಅವರಿಗೆ ಋಣಿಯಾಗಿದೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.
ಪಟ್ಟಣದ ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮದಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ಮಾದರಿ ವ್ಯವಸ್ಥೆಯ ಲ್ಯಾಪ್‌ಟಾಪ್ ವಿತರಿಸಿ, ಧರ್ಮ ಕಾರ್ಯಗಳು ನಿಜಕ್ಕೂ ಮಾನವೀಯತೆಯಡಿ ಅರಳಿ ನಿಲ್ಲುತ್ತವೆ. ಇಂತಹ ಸೃಜನಶೀಲ ಸಂಸ್ಥೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇಡೀ ಗ್ರಾಮೀಣರ ಬದುಕನ್ನು ಸಹಕಾರದ ರೂಪದಲ್ಲಿ ಸೌಲಭ್ಯಯುತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್.ಜಿ. ಪಿಯು ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅವರು ಜ್ಞಾನತಾಣ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣದ ವ್ಯವಸ್ಥೆಯಲ್ಲಿನ ಆಧುನೀಕರಣಕ್ಕೆ ಇಂದು ಬಳಕೆಯಾಗುತ್ತಿರುವ ತಂತ್ರಜ್ಞಾನಕ್ಕೆ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗಡೆ ಅವರು ಕಾಳಜಿಪೂರ್ವಕವಾಗಿ ಅಂತರ್ಜಾಲ ಶಿಕ್ಷಣಕ್ಕೆ ಪೂರಕವಾಗಿ ರಿಯಾಯಿತಿಯಲ್ಲಿ ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತಿರುವುದು ಮಾದರಿ ಕಾರ್ಯ ಎಂದರು.
ಸಂಸ್ಥೆಯ ಕ್ಷೇತ್ರ ಯೋಜನಾಧಿಕಾರಿ ಸಂತೋಷ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಉಪಯೋಗ ಒದಗಿಸುವಲ್ಲಿ 20 ಸಾವಿರಕ್ಕೂ ಹೆಚ್ಚು ಲ್ಯಾಪ್ ಟಾಪ್ ಮತ್ತು ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಈಗಾಗಲೇ 2 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಸಾಂಕೇತಿಕವಾಗಿ ಮೂವರು ವಿದ್ಯಾರ್ಥಿಗಳಾದ ಪಾನಮಾ ನಾಗರಾಜ, ಮುಬಾಸಿರ ಇಂಡಿ ಹಾಗೂ ಅಂಬಿಕಾ ಜೇರಟಗಿ ಅವರಿಗೆ ವಿತರಿಸಲಾಗುತ್ತಿದೆ ಎಂದರು.
ಬಿಆರ್‌ಪಿ ಎಂ.ಎಂ. ದೊಡಮನಿ, ತಿಪ್ಪೆಸ್ವಾಮಿ ಜೆ., ಪ್ರಕಾಶ ಡಿ., ಸಚೀನ್ ಕವಟಗಿ, ಶಿವಾನಂದ ಕಲ್ಲೋಳ್ಳಿ, ಶ್ರೀಕಾಂತ ಮಣೂರ, ಶಿವಶಂಕರ ಹಡಪದ, ಪ್ರಕಾಶ ಸಜ್ಜನ, ಮರೆಪ್ಪ ಸಿಂದಗಿ ಮತ್ತಿತರರಿದ್ದರು.
ರಾಧಾ ಪತ್ತಾರ ಪ್ರಾರ್ಥಿಸಿದರು. ಧರ್ಮಪ್ಪ ಜೋಗೂರ ನಿರೂಪಿಸಿದರು. ಸಚಿನ್ ಕವಟಗಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಮಲಾ ಬಿ.ಎಸ್. ವಂದಿಸಿದರು.