ಸಿಂದಗಿ ಡಿಪೋ ಬಸ್ ಚಾಲಕ ಕಂ ನಿರ್ವಾಹಕನ ಮೇಲೆ ಹಲ್ಲೆ, ಇಟಿಎಂ ಯಂತ್ರ ಒಡೆದು ಜೀವ ಬೆದರಿಕೆ !

crime
Published on

ವಿಜಯಪುರ: ಸಾರಿಗೆ ಇಲಾಖೆಯ ಬಸ್ ಚಾಲಕ ಕಂ ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಹಣ ಕಸಿದುಕೊಂಡು ಜೀವ ಬೆದರಿಕೆ ಹಾಕಿದ ಪ್ರಕರಣ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಸಿಂದಗಿ ಬಸ್ ಡಿಪೋದ ಚಾಲಕ ಕಂ ನಿರ್ವಾಹಕ ಶಂಕರಗೌಡ ಶಿವಲಿಂಗಪ್ಪಗೌಡ ಪಾಟೀಲ ಎಂಬುವರ ಮೇಲೆ ಹಲ್ಲೆಯಾಗಿದ್ದು, ಘಟನೆಯಲ್ಲಿ ಇಲಾಖೆಗೆ ಸೇರಿದ 3 ಸಾವಿರ ರೂಪಾಯಿ ನಗದು ಹಾಗೂ ಕೊರಳಲ್ಲಿದ್ದ ವೈಯಕ್ತಿಕ ಚಿನ್ನದ ಸರ ಕಾಣೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಪ್ಪ ಬಸಪ್ಪ ಚೌದರಿ, ಬಲಭೀಮ ಗೋಲ್ಲಾಳಪ್ಪ ಚೌದರಿ, ಗೋಲ್ಲಾಳಪ್ಪ ಬಸಪ್ಪ ಚೌದರಿ, ಪವನ ಗೋಲ್ಲಾಳಪ್ಪ ಚೌದರಿ ಹಾಗೂ ಮಲ್ಲು ಪೂಜಾರಿ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಜು.19ರಂದು ಕನ್ನೊಳ್ಳಿ ಟೋಲ್‌ಗೇಟ್‌ನಲ್ಲಿ ಟೋಲ್ ಕಟ್ಟಲೆಂದು ಬಸ್ ನಿಲ್ಲಿಸಿದ ಸಂದರ್ಭ ಹಿಂದಿನಿಂದ ಟಂಟಂದಲ್ಲಿ ಬಂದ ಮೂವರು ಬಸ್ ಗೆ ಕೈಯಿಂದ ಜೋರಾಗಿ ಬಡಿಯಲಾರಂಭಿಸಿದ್ದಾರೆ. ಬಸ್ ಮುಂದಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಶಂಕರಗೌಡ ವಾಪಸ್ ಬಂದ ವಿಚಾರಿಸಲಾಗಿ ಟಂಟಂದಲ್ಲಿದ್ದವರು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ ಬಸ್ ಕನ್ನೊಳ್ಳಿಗೆ ಬಂದು ನಿಂತಾಗಿ ಹಿಂದಿನಿಂದ ಬಂದ ಆರೋಪಿತರು ಶಂಕರಗೌಡರ ಅಂಗಿ ಕಾಲರ್ ಹಿಡಿದು ಎಳೆದಾಡಿ, ಕೊರಳಲ್ಲಿದ್ದ ಇಟಿಎಂ ಯಂತ್ರ ಕಸಿದುಕೊಂಡು ಒಡೆದು ಹಾಕಿದ್ದಾರೆ. ಆಗ ಸಂಸ್ಥೆಯ ಆದಾಯದ ಹಣ 3000ರೂಪಾಯಿ ಹಾಗೂ ಕೊರಳಲ್ಲಿದ್ದ ಚಿನ್ನದ ಸರ ಕಳೆದು ಹೋಗಿದೆ. ಇಷ್ಟೆಲ್ಲ ಗಲಾಟೆ ಬಳಿಕ ‘ಇನ್ಮುಂದೆ ಈ ಊರ ಮೇಲೆ ಹ್ಯಾಗೆ ಡ್ಯೂಟಿ ಮಾಡುತ್ತಿ ನೋಡುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಶಂಕರಗೌಡ ಸಿಂದಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net