

ಸಿಂದಗಿ: ತಾಲೂಕಿನ ಬನ್ನೆಟ್ಟಿ ಪಿ.ಎ. ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲು ತೂರಾಟ ನಡೆದಿದೆ. ಎರಡು ಕುಟುಂಬಗಳ ಹಳೆಯ ವೈಷಮ್ಯವೇ ಘಟನೆಗೆ ಕಾರಣ. ಗ್ರಾಮದಲ್ಲಿ ಎದುರು ಬದುರಾಗಿ ಹೊರಟಿದ್ದ ಎರಡು ಕುಟುಂಬದ ಸದಸ್ಯರು ಒಬ್ಬೊರಿಗೊಬ್ಬರು ವಿರುದ್ಧ ವರ್ತನೆ ತೋರುತ್ತ, ಉಗುಳುವುದು, ಹ್ಞೂಂ ಗುಟ್ಟುವುದು ಮಾಡುತ್ತಿದ್ದ ವೇಳೆ ಎರಡು ಕುಟುಂಬದವರ ಮಧ್ಯೆ ಮಾತಿನ ಚಕಮಕಿ ಜತೆಗೆ ಕಲ್ಲು ತೂರಾಟ ನಡೆದಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಷಯ ತಿಳಿದ ದೇವರಹಿಪ್ಪರಗಿ, ಸಿಂದಗಿ ಠಾಣೆ ಸಿಬ್ಬಂದಿ ಹಾಗೂ ಸಿಪಿಐ ಎಚ್.ಎಂ. ಪಾಟೀಲ ಗ್ರಾಮಕ್ಕೆ ತೆರಳುವಷ್ಟರಲ್ಲಿ ಎರಡು ಗುಂಪಿನವರು ಘಟನಾ ಸ್ಥಳದಿಂದ ಓಡಿ ಹೋಗಿದ್ದಾರೆ. ನಂತರ ಡಿವೈಎಸ್ಪಿ ಶ್ರೀಧರ ದಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಘಟನೆ ಮಾಹಿತಿ ಪಡೆದು, ಘರ್ಷಣೆಗೆ ಕಾರಣರಾದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನ್ನೆಲೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ.