

ಸಿಂದಗಿ: ಕೋವಿಡ್-19 ಮಹಾಮಾರಿಯ ಬಗ್ಗೆ ನಾವು ಮತ್ತು ನಮ್ಮ ಕುಟುಂಬ ಜಾಗೃತರಾಗಿ ಆಘಾತಕ್ಕೊಳಗಾಗುವುದನ್ನು ತಪ್ಪಿಸೋಣ.ನಾವೂ ಬದುಕೋಣ, ನಮ್ಮವರನ್ನು ಬದುಕಿಸೋಣ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಈರಣ್ಣ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯವಾದಿಗಳಿಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು, ಎರಡು ಸೇರಿ ಮುಂದಿನ ಮೂರನೇ ಅಲೆಯನ್ನು ನಾವು ಲಸಿಕೆ ಪಡೆಯುವ ಮೂಲಕ ಹಾಗೂ ಮಾಸ್ಕ್ ಬಳಸುವುದು ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಯಮಗಳ ಮೂಲಕ ತಡೆಯಬಹುದಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು.
ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಹಾಗೂ ಜೆಎಂಎ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಆಶಪ್ಪ ಮಾತನಾಡಿ, ಕರೊನಾ ಲಸಿಕೆ ಬಗ್ಗೆ ಯಾವುದೇ ತಪ್ಪು ಗ್ರಹಿಕೆ ಬೇಡ. ಲಸಿಕೆ ಪಡೆಯುವ ವ್ಯಕ್ತಿಗೆ ಶೇ. 99ರಷ್ಟು ಆರೋಗ್ಯ ರಕ್ಷಣೆಯಿದೆ ಎಂದರು.
ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿದರು. ಕರೊನಾದಿಂದ ಜೀವ ಕಳೆದುಕೊಂಡ ಹೈಕೋರ್ಟ್‌ನ ಐವರು ಹಾಗೂ 25 ಜನ ನ್ಯಾಯಾಧೀಶರು ಮತ್ತು 218 ವಕೀಲರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ, ಸರ್ಕಾರಿ ವಕೀಲರಾದ ಎಂ.ಎಸ್. ಪಾಟೀಲ, ನ್ಯಾಯವಾದಿ ವಿ.ಬಿ. ಪಾಟೀಲ, ಬಿ.ಜಿ. ನೆಲ್ಲಗಿ, ಆರೋಗ್ಯ ಇಲಾಖೆಯ ಪ್ರಭು ಜಂಗಿನಮಠ ಇದ್ದರು.