ಆಲಿಕಲ್ಲು ಮಳೆ-ಹಾಳಾದ ರೈತನ ‘ಬಾಳೆ’

VJP BELE
Published on

ಪರಶುರಾಮ ಭಾಸಗಿ ವಿಜಯಪುರ

ಮಹಾಮಾರಿ ಕರೊನಾ ಗಾಯ ಮಾಸುವ ಮುನ್ನವೇ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಮೂರ‌್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಅಕಾಲಿಕ ಮಳೆ ಜಿಲ್ಲೆಯ ರೈತರನ್ನು ಜರ್ಝರಿತರನ್ನಾಗಿಸಿದೆ. ಅಕಾಲಿಕ ಆಲಿಕಲ್ಲು ಮಳೆಯ ಹೊಡೆತಕ್ಕೆ ತೋಟಗಾರಿಕೆ ಬೆಳೆ ನಲುಗಿದ್ದು ಬಾಳೆ ಹಾಗೂ ಪಪ್ಪಾಯಿ ಸೇರಿದಂತೆ ಅಪಾರ ಬೆಳೆ ಹಾನಿಯಾಗಿದೆ. ಇನ್ನೇನು ಕೈ ಸೇರಬೇಕಿದ್ದ ಫಸಲು ನೆಲಕಚ್ಚಿದೆ. ಜತೆಗೆ ಬಿರುಸಾದ ಗಾಳಿ ಮತ್ತು ಧಾರಾಕಾರ ಮಳೆಗೆ ಬಾಳೆ ಬೆಳೆ ಧರಾಶಾಹಿಯಾಗಿದೆ.

50-60 ಎಕರೆ ಹಾನಿ

ಏ. 1 ರಿಂದ 21 ರವರೆಗೆ ಜಿಲ್ಲೆಯಲ್ಲಿ 18 ಮಿಮೀ ಮಳೆಯಾಗಿದೆ. ಅಂದಾಜು 200 ಹೆಕ್ಟೆರ್ ಬಾಳೆ ಬೆಳೆಯಲಾಗುತ್ತಿದ್ದು ಸಿಂದಗಿ ತಾಲೂಕಿನ ಆಲಮೇಲ, ದೇವಣಗಾಂವ, ಆಲಳ್ಳಿ, ಬ್ಯಾಡಗಿಹಾಳ, ತಾಳಿಕೋಟೆ ತಾಲೂಕು, ಬಸವನಬಾಗೇವಾಡಿ ತಾಲೂಕು, ಕೂಬಕಡ್ಡಿ ಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಬೆಳೆ ಪ್ರಮಾಣ ಹೆಚ್ಚಿದೆ. ಮೂರ‌್ನಾಲ್ಕು ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ಅಂದಾಜು 50-60 ಎಕರೆ ಬಾಳೆ ಬೆಳೆ ಹಾನಿಯಾಗಿದೆ. ಕಟಾವಿಗೆ ಬಂದ ಫಸಲು ನೆಲಕಚ್ಚಿದೆ. ಇತ್ತ ಮಾರಲು ಆಗದೇ ತಿನ್ನಲೂ ಆಗದೇ ರೈತ ಬಾಳೆ ಮುಂದಿಟ್ಟುಕೊಂಡು ಗೋಳು ತೋಡಿಕೊಳ್ಳುತ್ತಿದ್ದಾನೆ.

ಸಮೀಕ್ಷೆ ಆರಂಭ

ಏ. 18 ರಿಂದಲೇ ಸಮೀಕ್ಷೆ ಕಾರ್ಯ ಕೈಗೊಂಡಿರುವ ತೋಟಗಾರಿಕೆ ಇಲಾಖೆ ಈಗಾಗಲೇ ಶೇ. 70 ರಷ್ಟು ಸಮೀಕ್ಷೆ ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಸಮೀಕ್ಷೆ ಪೂರ್ಣಗೊಳ್ಳಲಿದ್ದು ಹಾನಿ ನಿಖರ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಪೂರಕವೆಂಬಂತೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಹ ಪ್ರಸ್ತಾವನೆ ಆಧರಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ ಬಾಳೆ ಬೆಳಗಾರರ ಬಾಳಲ್ಲಿ ಹುಳಿ ಹಿಂಡಿದ್ದು ಸರ್ಕಾರದ ಪರಿಹಾರದ ಮೇಲೆ ಅನ್ನದಾತ ಚಿತ್ತನೆಟ್ಟಿದ್ದಾನೆ.

ಬಾಳೆ ಬೆಳೆ ಹಾನಿ ಬಗ್ಗೆ ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ. ಸಮೀಕ್ಷೆ ಆರಂಭಗೊಂಡಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು.
ಶಶಿಕಲಾ ಜೊಲ್ಲೆ, ಉಸ್ತುವಾರಿ ಮಂತ್ರಿ

ಕರೊನಾ ಭೀತಿ ನಡುವೆಯೂ ಇಲಾಖೆ ಸಿಬ್ಬಂದಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಪ ಸ್ವಲ್ಪ ಬಾಳೆ ಕಟಾವಾಗಿದೆ. ಬಹುತೇಕ ಫಸಲು ಕಟಾವಾಗಬೇಕಿತ್ತು. ಇಂಥ ಹೊತ್ತಿನಲ್ಲೇ ಅಕಾಲಿಕ ಆಲಿಕಲ್ಲು ಮಳೆ ಸುರಿದಿದ್ದು ಫಸಲು ಹಾಳಾಗಿದೆ. ಸಮೀಕ್ಷೆ ನಡೆದಿದ್ದು ಆ ಬಳಿಕವೇ ಹಾನಿಯ ಸ್ಪಷ್ಟ ಚಿತ್ರಣ ಸಿಗಲಿದೆ.
ಸಂತೋಷ ಇನಾಮದಾರ, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net