ಎಸ್‌ಟಿ ಮೀಸಲಾತಿಗೆ ಪ್ರಾಮಾಣಿಕ ಪ್ರಯತ್ನ

h2-Kuruba samavesha
Published on

ಹುಬ್ಬಳ್ಳಿ: ಕರ್ನಾಟಕದಲ್ಲಿ ಮೂರನೇ ಅತಿದೊಡ್ಡ ಸಮುದಾಯ ಕುರುಬರು. ಎಸ್‌ಟಿ ಮೀಸಲಾತಿ ಕೊಡುವ ಸಂಬಂಧ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ನಗರದ ಗೋಕುಲ ಗಾರ್ಡನ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಕುರುಬ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಕಾ ಕಾಲಲ್ಕರ್ ಹಾಗೂ ಮೆಂಡಲ್ ವರದಿಯನ್ನು ತಿರಸ್ಕರಿಸಲಾಯಿತು. ಆದರೆ, ನಮ್ಮ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸುವ ಮೂಲಕ ಒಬಿಸಿ ಸಮುದಾಯದ ಹಿತರಕ್ಷಣೆ ಮಾಡುತ್ತಿದೆ. ಇದರ ಪ್ರಕಾರ ಶೇ. 60 ರಷ್ಟು ಒಬಿಸಿ ಸಂಸದರು ಇದ್ದಾರೆ. ಆದಾಯ ಪ್ರಮಾಣ ಪತ್ರದ ಮಿತಿಯಲ್ಲಿ 12 ಲಕ್ಷ ರೂ. ಗೆ ಹೆಚ್ಚಿಸಿದ್ದೇವೆ ಎಂದರು.
ಕುರುಬರಿಗೆ ಈಗಾಗಲೇ ನಮ್ಮ ಬಿಜೆಪಿಯಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಾನಮಾನ ಕಲ್ಪಿಸುತ್ತೇವೆ. ಕನಕ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಹಕ್ಕಬುಕ್ಕರು, ಶಿವಾಜಿ ಮಹಾರಾಜರು ಹೋರಾಟ ಮಾಡಿದ್ದರಿಂದ ಹಿಂದು ಸಮಾಜ ಉಳಿದಿದೆ. ಇಲ್ಲವಾದರೆ ನಾವೆಲ್ಲ ಖಾನ್ ಆಗಿರಬೇಕಿತ್ತು ಎಂದು ಹೇಳಿದರು.
ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೋಡಿ ಕೊಟ್ಟರೆ ನಿರ್ಮಿಸಿ ಕೊಡುತ್ತೇವೆ. ಈಗಾಗಲೇ ಕುರುಬ ಸಮಾಜದವರ ದೇವಸ್ಥಾನಗಳು, ಸಮುದಾಯ ಭವನಗಳನ್ನು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಕುರುಬ ಸಮಾಜ ಶುಭಸಂಕೇತದ ಸಮಾಜ. ಅವರಿಂದ ಬೋಣಿಗೆ ಪಡೆದು ಮುಂದಿನ ಕೆಲಸ ಆರಂಭಿಸುವ ಸಂಪ್ರದಾಯ ಈಗಲೂ ಇದೆ. ನಾನೂ ಕೂಡ ಇವರನ್ನೇ ಮೊದಲು ಕರೆದು ಕೆಲಸ ಆರಂಭಿಸಿದ್ದೇನೆ. ಈ ಸಮಾಜಕ್ಕೆ ನನ್ನ ಬೆಂಬಲ ಸದಾ ಇರಲಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕನಕ ಭವನ ನಿರ್ಮಾಣಕ್ಕೆ ಜಾಗ ತೋರಿಸಿಕೊಡಬೇಕು. ಅನುದಾನ ನೀಡಿ ಭವನ ನಿರ್ಮಿಸಿ ಕೊಡುತ್ತೇವೆ. ನನ್ನ ಮೊದಲ ಆದ್ಯತೆ ಈ ಸಮಾಜಕ್ಕೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕೇಡು ಬಯಸದ ಸಮಾಜ ಕುರುಬರು, ನ್ಯಾಯ-ನೀತಿಗೆ ಹೆಸರು ವಾಸಿ. ಇಂಥ ಸಮಾಜವು ನಮ್ಮ ಬಿಜೆಪಿ ಪರವಾಗಿದೆ. ದೇಶದಲ್ಲಿ ಹೊಸ ಕ್ರಾಂತಿಯನ್ನು ಮೋದಿ ಅವರು ಮಾಡುತ್ತಿದ್ದಾರೆ. ನ್ಯಾಯ-ನೀತಿಯಿಂದ ನಡೆದುಕೊಳ್ಳುತ್ತಿದ್ದಾರೆ. ನಮ್ಮ ದೇಶದ ಕೀರ್ತಿಯನ್ನು ವಿಶ್ವದ ಅಗಲ ತೆಗೆದುಕೊಂಡು ಹೋಗಿದ್ದಾರೆ ಎಂದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಂದ್ರ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಮಾಜಿ ಶಾಸಕಿ ಸೀಮಾ ಮಸೂತಿ, ಪ್ರಮುಖರಾದ ಬೀರಪ್ಪ ಖಂಡೇಕರ, ಮಾ. ನಾಗರಾಜ, ಮೇನಕಾ ಹುರಳಿ, ಡಾ. ಮಹೇಶ ನಾಲವಾಡ, ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ರಾಜೇಶ್ವರಿ ಸಾಲಗಟ್ಟಿ, ಮಾಲತೇಶ ಶ್ಯಾಗೋಟಿ, ಇತರರು ಇದ್ದರು. ಬೀರಪ್ಪ ತಿರಕಪ್ಪನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net