1008 ಕಂಠಗಳಿಂದ ಏಕಕಾಲಕ್ಕೆ ಭಗವದ್ಗೀತಾ ಪಠಣ

New Geeta New
Published on

ಹುಬ್ಬಳ್ಳಿ : ಗೀತಾ ಜಯಂತಿ ಅಂಗವಾಗಿ ಸಂಸ್ಕೃತ ಭಾರತೀ ಆಶ್ರಯದಲ್ಲಿ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಮೈದಾನದಲ್ಲಿ ಡಿ. 15 ರಂದು 1,008 ಕಂಠಗಳಿಂದ ಏಕ ಕಾಲಕ್ಕೆ ಭಗವದ್ಗೀತೆಯ ಹನ್ನೆರಡು ಮತ್ತು ಹದಿನೈದನೇ ಅಧ್ಯಾಯಗಳ ಪಠಣ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಭವಾನಿ ನಗರದ ಶ್ರೀ ಜಯತೀರ್ಥ ಸಭಾ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಪ್ರಾಂತ ಮಂತ್ರಿ ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.

ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಈ ಗೀತಾಮೃತಮ್ ಕಾರ್ಯಕ್ರಮದಲ್ಲಿ ಅಂದಾಜು ನಾಲ್ಕೈದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಅಂದು ಮಧ್ಯಾಹ್ನ ಪ್ರದರ್ಶಿನಿ ಉದ್ಘಾಟನೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಗೀತಾ ಅಂತಾಕ್ಷರಿ, ಗೀತೆಯ 18 ಅಧ್ಯಾಯಗಳನ್ನು ಕಂಠಸ್ಥ ಮಾಡಿ ಹೇಳುವ ಜನರ ಸನ್ಮಾನ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಈ ಕಾರ್ಯಕ್ರಮ ನಡೆಸಲು ಅಗತ್ಯವಾದ ಕಾರ್ಯಕರ್ತರ ಪಡೆಯೊಂದು ನಿರ್ವಣವಾಗುತ್ತಿದೆ. ಅಂದು ಪಠಣಗೊಳ್ಳುವ ಗೀತೆಯ ಎರಡು ಅಧ್ಯಾಯಗಳನ್ನು ಸಂಸ್ಥೆಯ ಶಿಕ್ಷಕರು ಆಸಕ್ತರಿಗೆ ಆನ್​ಲೈನ್ ಮೂಲಕ ಪಾಠ ಹೇಳಿಕೊಟ್ಟಿದ್ದಾರೆ. ಈಗ ಆಫ್​ಲೈನ್​ದಲ್ಲಿ ಆಸಕ್ತರು ಇದ್ದ ಸ್ಥಳದಲ್ಲಿಯೇ ಹೋಗಿ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಾಂತ ಜನಸಂಪರ್ಕ ಅಧಿಕಾರಿ ಮುಕುಂದ ಜಠಾರ, ನಗರ ಸಂಪರ್ಕ ಪ್ರಮುಖ ಪ್ರಶಾಂತ ಕುಲಕರ್ಣಿ, ಶಿಕ್ಷಕಿ ಕೃಷ್ಣವೇಣಿ ಹೆಗಡೆ ಮಾತನಾಡಿದರು. ಭಾರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿತೇಂದ್ರ ಮಜೇಥಿಯಾ, ಎ.ಸಿ.ಗೋಪಾಲ, ಮಹಾದೇವ ಕರಮರಿ, ಚನ್ನು ಹೊಸಮನಿ, ಕೃಷ್ಣೇಂದ್ರ ವಾಡಿಕರ, ರಾಜಶೇಖರ ಪಾಟೀಲ, ಡಾ.ಕೃಷ್ಣ ನಾಡಗೌಡ ಸಲಹೆ, ಸೂಚನೆ ನೀಡಿದರು.

ಗೀತಾಮೃತಮ್ ಸಂಯೋಜಕ ಹರ್ಷ ಪಟ್ಟಾಭಿ ಸ್ವಾಗತಿಸಿದರು. ಅನುರಾಧಾ ಹರ್ಷ ನಿರೂಪಿಸಿದರು. ಸದಾನಂದ ಕಾಮತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net