

ಲಕ್ಷ್ಮೇಶ್ವರ: ಕಟ್ಟಡ ಪರವಾನಗಿ, ಯುಜಿಇಡಿ ಕಾಮಗಾರಿ, ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ, ಮೂಲಸೌಲಭ್ಯ ಸೇರಿ ಒಟ್ಟು 12 ವಿಷಯಗಳ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಯಿತು.
ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ಆರಂಭವಾಗುತ್ತಿದ್ದಂತೆ ಸರ್ವ ಸದಸ್ಯರು ಪ್ರಮಾಣವಚನ ಸ್ವೀಕರಿಸಿ, ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಮೌನಾಚರಣೆ ಸಲ್ಲಿಸಿದರು.
ಹಿರಿಯ ಸದಸ್ಯ ರಾಜಣ್ಣ ಕುಂಬಿ ಮಾತನಾಡಿ, ಮನೆ ನಿರ್ವಣಕ್ಕೆ ಪರವಾನಗಿ ಸಿಗದೆ 2 ವರ್ಷಗಳಿಂದ 200ಕ್ಕೂ ಹೆಚ್ಚು ಮನೆಗಳು ಅರ್ಧಕ್ಕೆ ನಿಂತಿವೆ. ಇದರಿಂದಾಗಿ ಜನರು ನಿತ್ಯ ಪುರಸಭೆಗೆ ಎಡತಾಕುವಂತಾಗಿದೆ. ಈ ಕುರಿತಂತೆ ಸರ್ಕಾರ ಹೊರಡಿಸಿರುವ ಅವೈಜ್ಞಾನಿಕ ಆದೇಶಕ್ಕೆ ಜಿಲ್ಲಾಧಿಕಾರಿಗಳು ಪರ್ಯಾಯ ಮಾರ್ಗ ಕಲ್ಪಿಸಿ ಕಟ್ಟಡ ಪರವಾನಗಿ ಪ್ರಕ್ರಿಯೆ ಸರಳಗೊಳಿಸಬೇಕು ಎಂದರು.
ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಕಟ್ಟಡ ಪರವಾನಗಿ ನೀಡಲು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಪುರಸಭೆಗೆ ಅನುಮತಿ ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಎಲ್ಲ ಸದಸ್ಯರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಸದಸ್ಯರು ದನಿಗೂಡಿಸಿ ಕೂಡಲೆ, ಪರ್ಯಾಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಹಕಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪೂರ್ಣಿಮಾ ಈ ಕುರಿತು ಸರ್ಕಾರದ ಆದೇಶವಾಗಿದ್ದು, ಅಧಿಕಾರಿ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಿ ಒಂದು ವಾರದೊಳಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳೋಣ ಎಂದರು.
ಪುರಸಭೆ ನಿಧಿಯ ಶೇ. 7.25 ಮತ್ತು ಶೇ.5 ರ ಯೋಜನೆಯಡಿ ಮಾರ್ಗಸೂಚಿ ಅನುಸಾರ ಕ್ರಿಯಾಯೋಜನೆಗೆ ಮಂಜೂರಾತಿ ನೀಡುವುದು, ಕಾರ್ಯಾಲಯದಲ್ಲಿ ಎಲ್ಲ ವಿಭಾಗಗಳ ಕಾರ್ಯಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು, ಬೀದಿ ದೀಪ, ಕುಡಿಯುವ ನೀರು ನಿರ್ವಹಣೆ ಇತ್ಯಾದಿಗಳ ಕುರಿತು ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಒಳಚರಂಡಿ ಯೋಜನೆ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಟೀಕೆ ಹಾಗೂ ತೊಂದರೆಗೆ ಕಾರಣವಾಗಿದೆ. ಒಳಚರಂಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು. 14 ನೇ ಹಣಕಾಸು ನಿಧಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಅದರಲ್ಲಿ ಕೆಲವು ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಿ ಅನುದಾನ ಮಂಜೂರಿ ಮಾಡುವ ಕುರಿತಂತೆ ಸಭೆಯಲ್ಲಿ ರ್ಚಚಿಸಲಾಯಿತು. ಉಪಾಧ್ಯಕ್ಷ ರಾಮಪ್ಪ ಗಡದವರ, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಅಧಿಕಾರಿಗಳಾದ ಎಫ್.ವೈ. ಇಂಗಳಗಿ, ಆರ್.ಎಂ. ಪಾಟೀಲ, ಮಂಜುಳಾ ಹೂಗಾರ, ಬಸವರಾಜ ಬಳಗಾನೂರ, ಆನಂದ ಬದಿ, ಮಂಜುನಾಥ ಮುದಗಲ್ ಇತರರಿದ್ದರು.