

ಚಿಕ್ಕಬಳ್ಳಾಪುರ: ಶಿಕ್ಷಣ ಇಲಾಖೆಯು ಪ್ರತಿ ವರ್ಷದಂತೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಸೀಟು ದಾಖಲಾತಿಯ ಪ್ರಕ್ರಿಯೆಗೆ ಚಾಲನೆ ನೀಡಿದೆ.
2025-26 ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 36 ಶಾಲೆಗಳಲ್ಲಿ 126 ಸೀಟುಗಳು ಮಂಜೂರಾಗಿವೆ. ಈಗಾಗಲೇ ನಿಗದಿತ ಅರ್ಹ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದ್ದು ಏ.15 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ನಿಯಮಾನುಸಾರ ದಾಖಲಾತಿ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇನ್ನು ಪಾಲಕರು ಮೊಬೈಲ್ ನಲ್ಲಿಯೇ ನೇರವಾಗಿ ಭರ್ತಿ ಮಾಡಿ, ಸಲ್ಲಿಸುವ ಅವಕಾಶವನ್ನೂ ಸಹ ನೀಡಲಾಗಿದೆ.
ಅರ್ಜಿ ಸ್ವೀಕಾರ, ಪರಿಶೀಲನೆ, ಮಾಹಿತಿ ಪಡೆಯುವುದು, ಆಕ್ಷೇಪಣೆ ಸಲ್ಲಿಕೆ ಸೇರಿದಂತೆ ನಾನಾ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ.
ಎಲ್ ಕೆಜಿ ದಾಖಲಾತಿಗೆ ಕನಿಷ್ಠ 4 ವರ್ಷ ಹಾಗೂ ಗರಿಷ್ಠ 6 ವರ್ಷ, ಒಂದನೇ ತರಗತಿ ದಾಖಲಾತಿಗೆ ಕನಿಷ್ಠ 6 ವರ್ಷ ಹಾಗೂ ಗರಿಷ್ಠ 8 ವರ್ಷ ನಿಗದಿಪಡಿಸಲಾಗಿದೆ.
*ಸೀಟು, ಒಲವಿನ ಪ್ರಮಾಣ ಕುಸಿತ
ವರ್ಷದಿಂದ ವರ್ಷಕ್ಕೆ ಆರ್ ಟಿಇ ಸೀಟುಗಳ ನಿಗದಿ ಪ್ರಮಾಣವು ಇಳಿಕೆಯಾಗುತ್ತ ಬರುತ್ತಿದೆ. ಹಾಗೆಯೇ ದಾಖಲಾತಿಯ ಅರ್ಜಿ ಸಲ್ಲಿಕೆಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪ್ರಾರಂಭದಲ್ಲಿ 2018-19ನೇ ಸಾಲಿನಲ್ಲಿ ಬರೋಬ್ಬರಿ 2751 ಸೀಟುಗಳು ನಿಗದಿಪಡಿಸಲಾಗಿತ್ತು. ಆದರೆ, 2023-24ನೇ ಸಾಲಿನಲ್ಲಿ 159 ಸೀಟು, 2024-25 ನೇ ಸಾಲಿನಲ್ಲಿ 139 ಸೀಟುಗಳು ನಿಗದಿಯೊಂದಿಗೆ ಪ್ರಮಾಣ ಇಳಿಕೆ ಕಂಡಿದ್ದು ಈ ಬಾರಿ 126 ಸೀಟುಗಳಿಗೆ ದಾಖಲಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಮೊದಲು ಪ್ರಿ ನರ್ಸರಿ ಇಲ್ಲವೇ ಒಂದನೇ ತರಗತಿಗೆ ಆಯ್ಕೆಯಾದ ಯಾವುದೇ ಖಾಸಗಿ ಶಾಲೆಗಳಿಗೆ ಪಾಲಕರು ಮಕ್ಕಳನ್ನು ದಾಖಲಿಸಬಹುದಾಗಿತ್ತು. ಮಗುವಿನ ಪಾಲಕರ ವಾಸಸ್ಥಳದ ಒಂದು ಕಿ.ಮೀ. ವ್ಯಾಪ್ತಿಯೊಳಗಿನ ಖಾಸಗಿ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ, ಬಳಿಕ ಸರ್ಕಾರಿ ಶಾಲೆ ಇರುವ ವ್ಯಾಪ್ತಿಯಲ್ಲಿ ಆರ್ಟಿಇ ಕಾಯ್ದೆ ಅನ್ವಯವಾಗಲ್ಲ ಎಂಬ ನಿಯಮವನ್ನು ಜಾರಿಗೆ ತಂದಾಗಿನಿಂದಲೂ ದಾಖಲಾತಿ ಒಲವು ಕಡಿಮೆಯಾಗಿದೆ. ಆನ್ ಲೈನ್ ಮೂಲಕ ಕಡಿಮೆ ಅರ್ಜಿಗಳು ಸ್ವೀಕಾರವಾಗುತ್ತಿವೆ.
*ಆರ್ ಟಿಇ ಕಾಯ್ದೆ ಅನುಕೂಲ
ಕೇಂದ್ರ ಸರ್ಕಾರವು ಕಳೆದ 2009ನೇ ಸಾಲಿನಲ್ಲಿ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಗುಣಮಟ್ಟ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಆರ್ ಟಿಇ ಕಾಯ್ದೆ ಜಾರಿಗೆ ತಂದಿದ್ದು ಇದರ ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ಮೀಸಲಿಟ್ಟು ಬಡ ಮಕ್ಕಳನ್ನು ಎಲ್ ಕೆಜಿ ಇಲ್ಲವೇ ಒಂದನೇ ತರಗತಿಗೆ ದಾಖಲಿಸಿಕೊಳ್ಳಲಾಗುತ್ತದೆ. ಸರ್ಕಾರವೇ ಅನುದಾನ ನೀಡಿ ಮಕ್ಕಳನ್ನು ಓದಿಸುತ್ತದೆ.