ಸರಳ ಶ್ರಾವಣ ಶನಿವಾರ ಪೂಜೆ

1
Published on

ಮೈಸೂರು: ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಶ್ರಾವಣ ಶನಿವಾರದ ಪೂಜಾ ಕೈಂಕರ್ಯಗಳು ಈ ಬಾರಿ ನಗರದಲ್ಲಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಲ್ಲದೆ ಸರಳವಾಗಿ ನಡೆಯಿತು. ಮತ್ತೊಂದೆಡೆ ಜನರು ಕರೊನಾವನ್ನು ಲೆಕ್ಕಿಸದೆ ನಾಗರಪಂಚಮಿಯನ್ನು ಆಚರಿಸಿದರು.

ಮಿನಿ ತಿರುಪತಿ ಎಂದೇ ಖ್ಯಾತಿ ಗಳಿಸಿರುವ ನಗರದ ಒಂಟಿಕೊಪ್ಪಲಿನ ಶ್ರಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜಾ ಕೈಂಕರ್ಯ ಸರಳವಾಗಿ ನಡೆಯಿತು. ಕೋವಿಡ್ ಭೀತಿಯಿಂದ ನಗರ ಪೊಲೀಸ್ ಆಯುಕ್ತರು ಶ್ರಾವಣ ಶನಿವಾರ ಪೂಜೆಯಲ್ಲಿ ಭಕ್ತರಿಗೆ ಭಾಗವಹಿಸಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮಾತ್ರ ಪೂಜೆಯಲ್ಲಿ ಭಾಗಿಯಾದರು.

ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನವನ್ನು ಬಂದ್ ಮಾಡಲಾಯಿತು. ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಲ ಭಕ್ತರು ದೇವಸ್ಥಾನದ ಹೊರಗೆ ನಿಂತು ದೇವರಿಗೆ ನಮಸ್ಕರಿಸಿ ತೆರಳಿದರು.

ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಮಾತ್ರವಲ್ಲದೆ ನಗರದ ಎಲ್ಲ ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳಲ್ಲೂ ಶ್ರಾವಣ ಶನಿವಾರದ ಪೂಜೆಯಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇದು ಮೊದಲ ಶ್ರಾವಣ ಶನಿವಾರವಾಗಿದ್ದು, ಆ.1, 8 ಮತ್ತು 15 ರಂದು ಸಹ ಶ್ರಾವಣ ಶನಿವಾರ ಪೂಜೆಗಳು ನಡೆಯಲಿವೆ.

ಸಂಭ್ರಮದ ನಾಗರಪಂಚಮಿ: ನಗರದ ಹೊರ ವಲಯದ ಸಿದ್ದಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಭಕ್ತರು ಸುಬ್ರಹ್ಮಣ್ಯೇಶ್ವಸ್ವಾಮಿಯ ದರ್ಶನ ಪಡೆದು ಪುನೀತರಾದರು. ಸ್ವಾಮಿಗೆ ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕರೊನಾ ಸೋಂಕು ಭಯದಿಂದ ಪೂಜೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿಲ್ಲ. ನಗರದ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನದಲ್ಲಿ ಭಕ್ತರು ನಾಗದೇವರ ವಿಗ್ರಹಗಳಿಗೆ ಹಾಲು ಎರೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.

ಈ ದೇವಸ್ಥಾನದಲ್ಲಿ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬರಲಿಲ್ಲ. ದೇವಸ್ಥಾನದಲ್ಲಿ ನಾಗದೇವರಿಗೆ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಮಾಸ್ಕ್ ಧರಿಸಿಕೊಂಡು ಪೂಜೆಯಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net