

ಸೋಮವಾರಪೇಟೆ : ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಯುವ ಬರಹಗಾರ ಹೇಮಂತ್ ಪಾರೇರ ರಚಿಸಿರುವ ಬೆಳ್ಳಿಗೆಜ್ಜೆ ಕವನ ಸಂಕಲನ ಬಿಡುಗಡೆ ಸಮಾರಂಭ ಪತ್ರಿಕಾಭವನದಲ್ಲಿ ಮಂಗಳವಾರ ನಡೆಯಿತು.
ಕೃತಿಯನ್ನು ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಸರಳವಾಗಿ ಬರೆದ ಕವನಗಳು ಓದುಗರ ಹೃದಯಕ್ಕೆ ತಲುಪುತ್ತವೆ. ಯಾವುದೇ ಕಥೆ, ಕವನಗಳು ಓದುಗರಿಂದ ಓದಿಸಿಕೊಂಡು ಹೋಗುವಂತೆ, ಭಾಷೆ ಹಿಡಿತ, ಪದಗಳ ಜೋಡಣೆ ಬರಹಗಾರರಿಗೆ ಬಹು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಅರಿಸಿನಗುಪ್ಪೆ ಸಿದ್ಧಲಿಂಗಪುರ ಶ್ರೀ ಮಂಜುನಾಥ ದೇವಾಲಯದ ರಾಜೇಶ್‌ನಾಥ್ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳು, ಬರಹಗಾರರ ಕೊಡುಗೆ ಕನ್ನಡ ಭಾಷೆಗೆ ಬಹಳಷ್ಟು ಇದೆ. ಪತ್ರಿಕೆ ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಬರಹಗಾರರು ತಮ್ಮ ಬರಹವನ್ನು ಬರೆಯಲು ಅವಕಾಶಗಳು ಹೆಚ್ಚಾಗಿವೆ. ಇದು ಯುವ ಸಾಹಿತಿಗಳ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಿದೆ ಎಂದರು.
ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು. ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಕವನ ಸಂಕಲನದ ಪರಿಚಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿದ್ದರು. ವೇದಿಕೆಯಲ್ಲಿ ಬರಹಗಾರರಾದ ಪವಿತ್ರಾ ಹೆತ್ತೂರು, ಉದ್ಯಮಿ ಸುಗುರಾಜ್ ಕುಟ್ಟಪ್ಪ ಇದ್ದರು.