ಸರಳ ವ್ಯಕ್ತಿತ್ವವೇ ಚುನಾವಣೆ ಗೆಲುವಿಗೆ ಶ್ರೀರಕ್ಷೆ

02bhr 2 umesh
ಟಿ.ಎಂ.ಉಮೇಶ್
Published on

ಬಾಳೆಹೊನ್ನೂರು: ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಮತ್ತು ಕ್ಷೇತ್ರದ ಅಭ್ಯರ್ಥಿಯ ಸರಳ ವ್ಯಕ್ತಿತ್ವ, ಜನಪರ ಕಾಳಜಿಯೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ವ್ಯಕ್ತಿತ್ವವೇ ಅಪರೂಪವಾಗಿದ್ದು, ಜನಸಾಮಾನ್ಯರ ಕಷ್ಟಗಳನ್ನು ಅರಿತಿರುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಪಂ ಹಂತದಿಂದ ಜನಪ್ರತಿನಿಧಿಯಾಗಿ ಆಯ್ಕೆಗೊಂಡ ಶ್ರೀನಿವಾಸ್ ಪೂಜಾರಿ ಅವರು, ಸಚಿವರಾಗಿ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿ ಯಾವುದೇ ಅಹಂ ಭಾವವನ್ನು ತೋರದೆ ಜನಪರವಾಗಿ ಕಾರ್ಯನಿರ್ವಹಿ ಎಲ್ಲ ಹಂತದ ಜನರ ಕಷ್ಟಗಳನ್ನು ಅರಿತಿದ್ದಾರೆ ಎಂದಿದ್ದಾರೆ.
ಕರಾವಳಿ, ಮಲೆನಾಡು, ಬಯಲುಸೀಮೆಗಳನ್ನು ಒಳಗೊಂಡ ವಿಶಿಷ್ಟ ಕ್ಷೇತ್ರವಾದ ಉಡುಪಿ-ಚಿಕ್ಕಮಗಳೂರಿಗೆ ಉತ್ತಮ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದ್ದು, ಇಲ್ಲಿನ ಎಲ್ಲ ಆಗು ಹೋಗುಗಳನ್ನು ಅರಿತ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕೋಟ ಅವರ ಆಯ್ಕೆ ಅಗತ್ಯವಾಗಿದ್ದು, ಇದರೊಂದಿಗೆ ದೇಶದ ಹಿತ ಚಿಂತನೆ ಅಡಗಿರಬೇಕಿದೆ ಎಂದು ತಿಳಿಸಿದ್ದಾರೆ.
ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುವ ಜತೆಗೆ ಎಲ್ಲಾ ವರ್ಗಗಳಿಗೆ ಸಮಾನತೆ ನ್ಯಾಯ ಒದಗಿಸುವಲ್ಲಿ ಕೋಟ ಯಶಸ್ವಿಯಾಗಿದ್ದಾರೆ. ವಿರೋಧ ಪಕ್ಷಗಳು ಬಿಜೆಪಿ ಅಭ್ಯರ್ಥಿ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆಲ್ಲಾ ಕ್ಷೇತ್ರದ ಮತದಾರರು ಏ.26ರಂದು ಉತ್ತರ ನೀಡಲಿದ್ದಾರೆ.
ದೇಶ ಹಾಗೂ ಕ್ಷೇತ್ರದ ಹಿತ ಚಿಂತನೆಯೊಂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾದ ಗುರುತರ ಜವಾಬ್ದಾರಿ ಕ್ಷೇತ್ರದ ಪ್ರಜ್ಞಾವಂತ ಮತದಾರರ ಮೇಲಿದ್ದು, ಜೂ.4ರಂದು ವಿಪಕ್ಷಗಳ, ವಿರೋಧಿಗಳ ಆರೋಪಕ್ಕೆ ತಕ್ಕ ಉತ್ತರ ನ್ಯಾಯಸಮ್ಮತವಾಗಿ ಹೊರಬರಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net