

ಬೆಂಗಳೂರು ಗ್ರಾಮಾಂತರ: ಹೊಸ ಜೀವನಕ್ಕೆ ಕಾಲಿಟ್ಟ ನವ ವಧು-ವರರು ಅನ್ಯೋನತೆಯಿಂದ ಜೀವನ ನಡೆಸಬೇಕು, ಸಂಸಾರ ಸಾಗರದಲ್ಲಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗ್ರಾಮಾಂತರ ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಸಲಹೆ ನೀಡಿದರು.
ದೊಡ್ಡಬಳ್ಳಾಪುರ ತಾಲೂಕು ಎಸ್.ಎಸ್.ಘಾಟಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಕಾರಣದಿಂದಾಗಿ ನನೆಗುದಿಗೆ ಬಿದ್ದಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಸರಳವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರಳ ವಿವಾಹಗಳು ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ವಿವಾಹದ ಹೆಸರಿನಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಬೀಳುತ್ತಿದ್ದು, ಅದೇ ವೆಚ್ಚವನ್ನು ಜೀವನ ನಡೆಸಲು ಬಳಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದರು. ನವ ದಂಪತಿ ಸರಳ ಸಾಮೂಹಿಕ ವಿವಾಹ ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕು ಎಸ್.ಎಸ್.ಘಾಟಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಅಂತರ್ಜಾತಿಯ ಜೋಡಿ, 1 ಅಂಗವಿಕಲ ಜೋಡಿ ಸೇರಿ ಒಟ್ಟು 7 ಜೋಡಿ ಸರಳ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿವೆ. ವಧುವಿಗೆ 40 ಸಾವಿರ ಮೌಲ್ಯದ ಮಾಂಗಲ್ಯ, ವಧು-ವರರಿಗೆ 15 ಸಾವಿರ ರೂಪಾಯಿ ನಗದು ನೀಡಲಾಗಿದೆ ಎಂದು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಮಾಹಿತಿ ನೀಡಿದರು.