

ಕೆರೂರ: ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡುವ ಬದಲಾಗಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ದಿಗಂಬರೇಶ್ವರರ 82ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನವದಂಪತಿಗಳು ಪತಿ, ಅತ್ತೆ, ಮಾವ ಸೇರಿ ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ಸರಳವಾಗಿ ವಿವಾಹವಾಗಿ ಉತ್ತಮವಾಗಿ ಜೀವನ ನಡೆಸಬಹುದು. ಗ್ರಾಮೀಣ ಜನರು ಇಂತಹ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳ ಮದುವೆ ಮಾಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಹೇಳಿದರು.
ದಿಗಂಬರೇಶ್ವರ ಮಠದ ಷಡಕ್ಷರ ಮಹಾಸ್ವಾಮಿಗಳು ಅಶೀರ್ವಚನ ನೀಡಿದರು. ವೇದಿಕೆಯ ಮೇಲೆ ನಿವೃತ್ತ ಮುಖ್ಯಶಿಕ್ಷಕ ಎಸ್.ಎ. ಭರಮಗೌಡರ, ಅನಿಲಕುಮಾರ ದೇಸಾಯಿ, ಚಂದ್ರಣ್ಣ, ಹಲಕುರ್ಕಿ ಗ್ರಾಪಂ ಉಪಾಧ್ಯಕ್ಷೆ ರೇಖಾ ತಳವಾರ ಇದ್ದರು.
15 ಜೋಡಿಗಳು ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರಕಾಶ ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಹಡಗಲಿ ಸ್ವಾಗತಿಸಿದರು. ಆರ್.ಬಿ. ಲೆಂಕೆನ್ನವರ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ. ಆಡಗಲ್ ವಂದಿಸಿದರು.