

| ಮಂಜುನಾಥ ಟಿ.ಭೋವಿ ಮೈಸೂರು
ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಣೆ ಮಾಡಿದರೆ ರಾಜ್ಯದ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಪೆಟ್ಟು ಬೀಳಲಿದ್ದು, ವಿವಿಧ ಕ್ಷೇತ್ರಗಳು ಇನ್ನಷ್ಟು ನಷ್ಟದಲ್ಲಿ ನಲುಗುವುದು ನಿಶ್ಚಿತ! ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಆರು ತಿಂಗಳಿಂದ ಪ್ರವಾಸೋದ್ಯಮ ನೆಲ ಕಚ್ಚಿದ್ದು, ಆದಾಯ ಹರಿವು ಪಾತಾಳಕ್ಕೆ ಕುಸಿದಿದೆ. ಸರಳವಾಗಿ ದಸರಾ ಆಚರಣೆ ಮಾಡಿದರೆ, ಕರೊನಾ ಸಂಕ್ರಮಣದಿಂದ ಚೇತರಿಸಿಕೊಳ್ಳುವ ಅಸ್ತ್ರವೊಂದು ಕೈತಪ್ಪಿ ಹೋಗಲಿದೆ. ದಸರಾ ಸಾಂಸ್ಕೃತಿಕ ಅಥವಾ ಧಾರ್ವಿುಕ ಉತ್ಸವಕ್ಕೆ ಸೀಮಿತವಾಗಿಲ್ಲ. ಪ್ರವಾಸೋದ್ಯಮದ ಮಹೋತ್ಸವವಾಗಿಯೂ ಬೆಳೆದಿದ್ದು, ಬಹಳಷ್ಟು ವ್ಯಾಪಾರಿಗಳಿಗೆ ಆದಾಯ ಗಳಿಕೆಯ ಹಬ್ಬವಾಗಿದೆ. ದಸರಾ ಮೇಲೆ ‘ಸರಳ’ ಆಚರಣೆ ಎನ್ನುವ ಮುದ್ರೆ ಒತ್ತಿಬಿಟ್ಟರೆ, ರಾಜ್ಯದ ಇಡೀ ಆರ್ಥಿಕ ಚಟುವಟಿಕೆ ಮೇಲೆ ಗದಾಪ್ರಹಾರ ಬೀಳುವುದು ಪಕ್ಕಾ.
ಸಾವಿರ ಕೋಟಿ ರೂ. ವಹಿವಾಟು: ದಸರಾ ಇಲ್ಲ ಎಂದರೆ ಒಂದು ಅಂದಾಜಿನ ಪ್ರಕಾರ ಮೈಸೂರಿಗೆ 600ರಿಂದ 800 ಕೋಟಿ ರೂ. ಖೋತಾ ಆಗಲಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ 1000-1200 ಕೋಟಿ ರೂ. ಮೊತ್ತದ ವಹಿವಾಟು ಕೈತಪ್ಪಲಿದೆ. ದಸರಾ ಕೇವಲ ಮೈಸೂರಿಗೆ ಸೀಮಿತವಲ್ಲ. ನಾಡಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಲಿದೆ. ಬೆಂಗಳೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆ ಸೇರಿ ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದು, ಆ ಮೂಲಕ ಅಲ್ಲಿಯೂ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ.
ದಸರಾ ಹಿನ್ನೆಲೆಯಲ್ಲಿ ಈ ಹಿಂದೆ ಪ್ರವಾಸಿಗರು ಆರು ತಿಂಗಳ ಮೊದಲೇ ಹೋಟೆಲ್ ಹಾಗೂ ಲಾಡ್ಜ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದರು. ಆದರೆ, ಈ ಬಾರಿ ಒಂದು ಕೊಠಡಿಯೂ ಬುಕ್ಕಿಂಗ್ ಆಗಿಲ್ಲ. ದಸರಾ ಸಂದರ್ಭದಲ್ಲೂ ಇವುಗಳು ಭರ್ತಿಯಾಗದಿದ್ದರೆ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದೆ. | ನಾರಾಯಣಗೌಡ ಅಧ್ಯಕ್ಷರು, ಮೈಸೂರು ಹೋಟೆಲ್ ಮಾಲೀಕರ ಸಂಘ
ಆರ್ಥಿಕ ಸರಪಳಿ ಸಡಿಲ
ದಸರಾ ಹೆಸರಿನಲ್ಲಿ ನಡೆಯುವ ಪ್ರವಾಸೋದ್ಯಮದಿಂದ ಮೈಸೂರಿನಲ್ಲಿಯೇ ಸಾವಿರಾರು ಕುಟುಂಬಗಳ ಜೀವನ ನಡೆಯುತ್ತಿದೆ. ಕಡ್ಲೆಕಾಯಿ, ಸೌತೆಕಾಯಿ ಮಾರುವವರಿಂದ ಹಿಡಿದು ಟಾಂಗಾ, ರಿಕ್ಷಾ, ಟ್ಯಾಕ್ಸಿ ಓಡಿಸುವವರು, ಹೋಟೆಲ್ ಮಾಲೀಕರು, ಪ್ರವಾಸಿ ಮಾರ್ಗದರ್ಶಿಗಳು... ಹೀಗೆ ವಿವಿಧ ವೃತ್ತಿನಿರತ ಕುಟುಂಬಗಳು ಇದನ್ನೇ ನಂಬಿಕೊಂಡು ಬದುಕುತ್ತಿವೆ. ಕೆಳ ಹಂತದಿಂದ ಹಿಡಿದು ಮೇಲ್ವರ್ಗದವರೆಗೆ ಒಂದಕ್ಕೊಂದು ಸಂಬಂಧವಿರುವ ಈ ‘ಆರ್ಥಿಕ ಸರಪಳಿ’ ಸರಳ ದಸರೆಯಿಂದ ಸಡಿಲವಾಗಿ ಪ್ರತಿಯೊಬ್ಬರೂ ನೇರವಾಗಿ ಮತ್ತು ಪರೋಕ್ಷವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ ರೈತರಿಗೆ ಮತ್ತು ಗ್ರಾಮಾಂತರ ಪ್ರದೇಶದವರಿಗೆ ದಸರಾ ಆದಾಯದ ಮೂಲ. ದಸರಾ ವೇಳೆ ಮೈಸೂರಿನ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆದರೆ, ಹಳ್ಳಿಗರ ಹೊಟ್ಟೆಯೂ ತುಂಬಲಿದೆ. ತರಕಾರಿ, ಹಣ್ಣು, ಹೂ ಸೇರಿ ಪ್ರತಿಯೊಂದು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ನಿರೀಕ್ಷೆ ಮೀರಿ ಆದಾಯ ತರಲಿದೆ.