ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ ಉತ್ಸವ

sri kshetra hombuja navarati 600X400
Published on

ರಿಪ್ಪನ್​ಪೇಟೆ: ಆಧುನಿಕ ಯುಗದಲ್ಲಿ ತಾಂತ್ರಿಕತೆ ಹೆಚ್ಚಿದಂತೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಸಿಲುಕಿ ನಮ್ಮ ಹಬ್ಬ, ಉತ್ಸವಗಳು ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ. ಐತಿಹಾಸಿಕ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವುದು ಅವಶ್ಯ ಎಂದು ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶ್ರೀ ಹೊಂಬುಜ ಜೈನ ಮಠದ ಆವರಣದಲ್ಲಿ ದಸರಾ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸ್ವಾಮೀಜಿ ಅವರ ಸಿಂಹಾಸನಾರೋಹಣ ಧಾರ್ವಿುಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ದಸರಾ ಹಬ್ಬವನ್ನು ದೇಶಾದ್ಯಂತ ಅನಾದಿ ಕಾಲದಿಂದಲೂ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷ ಪೂಜೆ, ಬನ್ನಿ ವಿತರಣೆ ಮೂಲಕ ಪ್ರತಿಯೊಬ್ಬರೂ ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳುವ ಆಶಯದೊಂದಿಗೆ ಆಚರಿಸಲಾಗುತ್ತದೆ. ವಿಜಯದಶಮಿಯಂದು ಮಾಡಿದ ಸಂಕಲ್ಪ ಬಹು ಬೇಗ ಪೂರ್ಣಗೊಳ್ಳುತ್ತದೆ.

ತಾವು ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಸನ್ಮಂಗಲಕ್ಕಾಗಿ ಮತ್ತು ಕರೊನಾ ವೈರಸ್ ಮಹಾಪಿಡುಗಿನಿಂದ ನಾಡಿಗೆ ಮುಕ್ತಿ ದೊರೆತು ನಾಡು ಸುಭಿಕ್ಷವಾಗಲಿ. ಕರೊನಾಕ್ಕೆ ಆದಷ್ಟು ಬೇಗ ಮದ್ದು ದೊರೆಯಲೆಂದು ಹರಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯಕ್ಕೆ ಮೂಲ ಮಾನವನ ದುರಾಸೆ. ಪರಿಸರ ಸಂರಕ್ಷಣೆ ಮತ್ತು ಸಮತೋಲನಕ್ಕೆ ಸರ್ಕಾರ ಅವಶ್ಯಕ ಯೋಜನೆ ರೂಪಿಸಬೇಕು. ಅತಿವೃಷ್ಟಿಯಿಂದ ಹಾನಿಗೀಡಾದ ನಿರ್ಗತಿಕರಿಗೆ ಪುನರ್ವಸತಿ ಕಾರ್ಯಗಳು ಶೀಘ್ರ ಪೂರ್ಣಗೊಳಿಸಬೇಕು. ಶ್ರೀಗಳ ಪರಂಪರಾನುಗತವಾಗಿ ನಡೆದು ಬಂದಿರುವ ಸಿಂಹಾಸನಾರೋಹಣ ಮತ್ತು ಪಾದಪೂಜೆಯನ್ನು ಮಠದ ಪುರೋಹಿತ ವರ್ಗದವರು ನೆರವೇರಿಸಿದರು. ಶ್ರೀಗಳಿಗೆ ರಾಜ್ಯದ ವಿವಿಧೆಡೆಯಿಂದ ಬಂದ ಜೈನ ಸಮಾಜದವರು ಫಲಪುಷ್ಪ ಸಮರ್ಪಿಸಿದರು. ನಂತರ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ಸಹಿತ ಫಲ ನೀಡಿದರು.

ಶ್ರೀ ಮಠದಿಂದ ಹೊರಟ ಸಾಲಾಂಕೃತ ಶೋಭಾಯಾತ್ರೆಯಲ್ಲಿ ಬನ್ನಿ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ವಿತರಿಸಲಾಯಿತು. ಶ್ರೀ ಮಠದ ಆನೆ ಐಶ್ವರ್ಯಾ ಮತ್ತು ಕುದುರೆಯ ಆಕರ್ಷಕ ನಡಿಗೆ ಶೋಭಾಯಾತ್ರೆಗೆ ಮೆರಗು ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net