

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬೆಳ್ಳಿ ಮೂರ್ತಿಯ ಪುರಪ್ರವೇಶ ಕಾರ್ಯಕ್ರಮ ಬುಧವಾರ ಅದ್ದೂರಿಯಾಗಿ ಜರುಗಲಿದೆ. ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಿ ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ದೇವಸ್ಥಾನವನ್ನು ಸಹ ಸಿಂಗರಿಸಲಾಗಿದೆ. ಗ್ರಾಮಕ್ಕೆ ಆಗಮಿಸುವ ಮೂರ್ತಿಯನ್ನು ತಳಿರು, ತೋರಣ ಹಾಗೂ ಸರ್ವಾಲಂಕೃತಗೊಂಡ ವಾಹನದಲ್ಲಿ ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸುವ ಮೂಲಕ ಮೂರ್ತಿಯ ಪುರ ಪ್ರವೇಶ ನಡೆಯಲಿದೆ. ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಸಂಜೆ ಮಹಾದಾಸೋಹ ಸೇವೆ ನಡೆಯಲಿದೆ.