ರಾಜ್ಯೋತ್ಸವಕ್ಕೆ ಬೆಳ್ಳಿ ಪರದೆ ದರ್ಶನ!, ಗ್ರಾಮಾಂತರ ಜಿಲ್ಲೆಯಲ್ಲಿ ಥಿಯೇಟರ್‌ಗಳ ನವೀಕರಣ, ಪ್ರೇಕ್ಷಕರ ಸ್ವಾಗತಕ್ಕೆ ಸಜ್ಜಾಗುತ್ತಿವೆ ಚಿತ್ರಮಂದಿರ

IMG-20201015-WA0104
Published on

ಬೆಂಗಳೂರು ಗ್ರಾಮಾಂತರ: ಸುದೀರ್ಘ ಬಿಡುವಿನ ಬಳಿಕ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರೇಕ್ಷಕ ಮಹಾಪ್ರಭುಗಳ ಸ್ವಾಗತಕ್ಕೆ ಚಿತ್ರಮಂದಿರಗಳು ಸಜ್ಜಾಗುತ್ತಿವೆ, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ 8 ಚಿತ್ರಮಂದಿರಗಳು ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಪ್ರೇಕ್ಷಕರಿಗೆ ದರ್ಶನ ಮಾಡಿಸಲು ಸಿದ್ಧತೆ ನಡೆಸಿವೆ.

ಜಿಲ್ಲೆಯಲ್ಲಿನ ಚಿತ್ರಮಂದಿರಗಳ ಪುನರಾರಂಭಕ್ಕೆ ವ್ಯವಸ್ಥಾಪಕ ಮಂಡಳಿ ಸಿದ್ಧತೆ ಆರಂಭಿಸಿದೆ. ನವೆಂಬರ್‌ನಲ್ಲಿ ಹೊಸ ಸಿನಿಮಾಗಳ ಬಿಡುಗಡೆಯಾಗಬಹುದೆಂಬ ನಿರೀಕ್ಷೆ ಇರುವ ಜತೆಗೆ ಕನ್ನಡ ರಾಜ್ಯೋತ್ಸವದಂದೇ ಪ್ರದರ್ಶನ ಆರಂಭಿಸಿದರೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಬಹುತೇಕ ಚಿತ್ರಮಂದಿರಗಳ ಮಾಲೀಕರು ನವೆಂಬರ್‌ನಲ್ಲಿ ಚಿತ್ರಮಂದಿರ ಆರಂಭಿಸಲು ಒಲವು ತೋರಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ನವೀಕರಣ ಕಾಮಗಾರಿ: ನೆಲಮಂಗಲದಲ್ಲಿ ರೂಪಾ ಹಾಗೂ ಶಾಂತಲಾ ಚಿತ್ರಮಂದಿರಗಳಿದ್ದು, ಇವೆರಡು ಚಿತ್ರಮಂದಿರಗಳಲ್ಲಿ ಕೆಲವೊಂದು ನವೀಕರಣ ಕಾಮಗಾರಿ ನಡೆಯುತ್ತಿದೆ. ದೊಡ್ಡಬಳ್ಳಾಪುರದಲ್ಲಿ ರಾಜಕಮಲ್, ಪ್ರಸನ್ನ ಹಾಗೂ ಸೌಂದರ್ಯ ಮಹಲ್ ಹೆಸರಿನ ಚಿತ್ರಮಂದಿರಗಳು ಗುರುವಾರ ಆರಂಭವಾಗಿಲ್ಲ. ಹೊಸ ಚಿತ್ರದ ನಿರೀಕ್ಷೆ ಹಾಗೂ ಸರ್ಕಾರಕ್ಕಿಟ್ಟಿರುವ ಕೆಲವೊಂದು ಬೇಡಿಕೆ ಈಡೇರಿಕೆ ಬಳಿಕ ಚಿತ್ರಮಂದಿರ ಆರಂಭಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ, ಹೊಸಕೋಟೆಯಲ್ಲಿ ರಾಘವೇಂದ್ರ, ಅಲಂಕಾರ್ ಹಾಗೂ ಸಾಧನಾ, ದೇವನಹಳ್ಳಿಯ ಗೌರಿಶಂಕರ ಹಾಗೂ ಸಂಗಮೇಶ ಚಿತ್ರಮಂದಿರಗಳದ್ದು ಇದೇ ಸ್ಥಿತಿ.

ಹೊಸ ಸಿನಿಮಾ ನಿರೀಕ್ಷೆ: ಪ್ರಸ್ತುತ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗದಿರುವುದು ಚಿತ್ರಮಂದಿರಗಳ ಆರಂಭಕ್ಕೆ ತಡೆಯಾಗಿದೆ. ಈಗಾಗಲೇ ಲಾಕ್‌ಡೌನ್‌ಗೆ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾಗಳನ್ನೇ ಮರುಬಿಡುಗಡೆ ಮಾಡುವ ಸನ್ನಿವೇಶವಿರುವುದರಿಂದ ಚಿತ್ರಮಂದಿರ ಮಾಲೀಕರು ಚಿತ್ರಮಂದಿರ ಆರಂಭಕ್ಕೆ ಮೀನಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಮರು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಲಾಕ್‌ಡೌನ್ ವೇಳೆ ಕಿರುಪರದೆಯಲ್ಲೇ ಸಾಕಷ್ಟು ಬಾರಿ ಪ್ರಸಾರವಾಗಿರುವುದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡುವರೇ ಎಂಬುದು ಚಿತ್ರಮಂದಿರ ಮಾಲೀಕರ ಪ್ರಶ್ನೆಯಾಗಿದೆ. ಇದರ ತೆಗೆ ಓಟಿಟಿಗಳಲ್ಲಿ ಚಿತ್ರಗಳು ಪ್ರಸಾರವಾಗಿರುವುದು ಹಳೇ ಚಿತ್ರಗಳ ಮರುಬಿಡುಗಡೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಮಾಲೀಕರ ಸಂಶಯಕ್ಕೆ ಕಾರಣವಾಗಿದೆ. ಇದರೊಂದಿಗೆ ಇತರ ಚಿತ್ರಮಂದಿರಗಳು ಮೊದಲು ತೆರೆಯಲಿ ಅಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ನಮ್ಮ ಚಿತ್ರಮಂದಿರ ಆರಂಭಿಸೋಣ ಎಂಬುದು ಕೆಲವರ ಚಿಂತನೆಯಾಗಿದೆ.

ಕಾರ್ಮಿಕರೂ ಇಲ್ಲ: ಕರೊನಾ ಲಾಕ್‌ಡೌನ್ ಬಳಿಕ ಚಿತ್ರಮಂದಿರ ಬಂದ್ ಆದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ ಹಲವರು ಸ್ವಗ್ರಾಮಗಳಲ್ಲೆ ನೆಲೆನಿಂತಿದ್ದರೆ ಮತ್ತೆ ಕೆಲವರು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಕ್ಷಣಕ್ಕೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನುರಿತ ಕೆಲಸಗಾರರು ಇಲ್ಲವಾಗಿರುವುದೂ ಸಹ ಚಿತ್ರಮಂದಿರ ಆರಂಭಿಸಲು ತೊಡಕಾಗಿದೆ ಎಂದು ಜಿಲ್ಲೆಯ ಚಿತ್ರಮಂದಿರ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹೊಸ ಚಿತ್ರಗಳು ಬಿಡುಗಡೆಯಾಗದ ಹೊರತು ಚಿತ್ರಮಂದಿರ ಆರಂಭಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಮರುಬಿಡುಗಡೆ ಚಿತ್ರ ಹಾಕಿದರೂ ಪ್ರೇಕ್ಷಕರು ಬರುವುದು ಅನುಮಾನ. ಸರ್ಕಾರದ ಮಾರ್ಗಸೂಚಿ ಪಾಲಿಸಲು ನಾವು ಸಿದ್ಧರಿದ್ದೇವೆ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ನವೆಂಬರ್‌ನಲ್ಲಿ ಚಿತ್ರಮಂದಿರ ಆರಂಭಿಸುವ ಚಿಂತನೆ ಇದೆ. ಮನೀಷ್ ಸೌಂದರ್ಯ ಮಹಲ್ ಚಿತ್ರಮಂದಿರ ಮಾಲೀಕ, ದೊಡ್ಡಬಳ್ಳಾಪುರ ಈಗಾಗಲೇ ಹಳೇ ಚಿತ್ರಗಳನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರೇಕ್ಷಕರು ವೀಕ್ಷಣೆ ಮಾಡಿದ್ದಾರೆ, ಮತ್ತೆ ಅದೇ ಸಿನಿಮಾ ಬಿಡುಗಡೆ ಮಾಡಿದರೆ ಪ್ರೇಕ್ಷಕರು ಬರುವುದು ಅನುಮಾನ, ಜತೆಗೆ ಬೆರಳೆಣಿಕೆ ಪ್ರೇಕ್ಷಕರು ಬಂದರೂ ನಿರ್ವಹಣಾ ವೆಚ್ಚವನ್ನು ಭರಿಸುವುದಾರೂ ಹೇಗೆ? ವಿಜಯ್‌ಕುಮಾರ್ ವ್ಯವಸ್ಥಾಪಕ ಸಂಗಮೇಶ್ವರ ಚಿತ್ರಮಂದಿರ, ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net