

ಹೊನ್ನಾವರ: ಖ್ಯಾತ ಯಕ್ಷಗಾನ ಭಾಗವತ ಉಮೇಶ ಭಟ್ ಬಾಡ ಅವರ ಸಾರಥ್ಯದಲ್ಲಿ ರೂಪುಗೊಂಡಿರುವ ಶ್ರೀ ಸಿದ್ಧಿವಿನಾಯಕ ಚಿಣ್ಣರ ಮೇಳ ನವಿಲಗೋಣದ ರಜತೋತ್ಸವ ಮೇ 26ರಂದು ಮಧ್ಯಾಹ್ನ 4 ಗಂಟೆಗೆ ಹಳದೀಪುರದ ಕುಂಬಾರಮಕ್ಕಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸದ್ಗುರು ಸಭಾಂಗಣದಲ್ಲಿ ಜರುಗಲಿದೆ ಎಂದು ಯಕ್ಷಗಾನ ಸಂಘಟಕ ಕಡತೋಕ ಗೋಪಾಲಕೃಷ್ಣ ಭಾಗವತ ತಿಳಿಸಿದರು.
ಪಟ್ಟಣದ ಫಾರೆಸ್ಟ್ ಕಾಲನಿಯ ಸ್ಫೂರ್ತಿರಂಗ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಮಂತ್ರಣ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಖ್ಯಾತ ಭಾಗವತ ಉಮೇಶ ಭಟ್ ಅವರ ಸಾರಥ್ಯದಲ್ಲಿ ಚಿಣ್ಣರ ಮೇಳದ ರಜತೋತ್ಸವ ಜರುಗಲಿದೆ. ಸಮಾರಂಭವನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ ಉದ್ಘಾಟಿಸುವರು.
ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್.ಶಂಭು ಭಟ್ ಕಡತೋಕ, ಲೀಲಾವತಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜಿ.ಜಿ. ಸಭಾಹಿತ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟಾ, ಉದ್ಯಮಿ ಕೃಷ್ಣಮೂರ್ತಿ ಭಟ್, ಹಳದಿಪುರ ಗ್ರಾಪಂ ಉಪಾಧ್ಯಕ್ಷ ಅಜಿತ್ ನಾಯ್ಕ, ಸಂಶೋಧಕ ಡಾ. ಎಸ್.ಡಿ. ಹೆಗಡೆ, ವೈದ್ಯ ಡಾ. ಪ್ರಕಾಶ ನಾಯ್ಕ, ಯಕ್ಷಗಾನ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ವಸಂತ ಭಟ್ ಭಾಗವಹಿಸಲಿದ್ದಾರೆ ಎಂದರು.
‘ರಜತೋತ್ಸವದಲ್ಲಿ ಮಧ್ಯಾಹ್ನ 4 ಗಂಟೆಗೆ ಚಿಣ್ಣರ ಮೇಳದ ಕಲಾವಿದರಿಂದ ‘ಅನಲಹಸ್ತ’ ಯಕ್ಷಗಾನ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ 15 ಯಕ್ಷಗಾನ ಭಾಗವತರಿಗೆ ಸನ್ಮಾನ, ನಂತರ ‘ಸಮಗ್ರ ಕಂಸ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ’ ಎಂದು ಮಾಹಿತಿ ನೀಡಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೆಶಕ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ಉಮೇಶ್ ಭಟ್ ಅವರು ಸಾವಿರಾರು ಮಕ್ಕಳಿಗೆ ಯಕ್ಷಗಾನ ಕಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಭಾಗವತರಿಗೆ ಸನ್ಮಾನ ಜರುಗಲಿದೆ ಎಂದರು.
ಭಾಗವತ ಉಮೇಶ್ ಭಟ್ ಬಾಡ ಮಾತನಾಡಿ, 1995ರಲ್ಲಿ ಚಿಣ್ಣರ ಮೇಳ ಪ್ರಾರಂಭಿಸಲಾಯಿತು. ಅದೀಗ 25 ವಸಂತಗಳನ್ನು ಪೂರೈಸಿದೆ. ಅಭಿಮಾನಿಗಳು ಹಾಗೂ ಚಿಣ್ಣರ ಮೇಳದ ಕಲಾವಿದರು ಚಿಣ್ಣರ ಮೇಳದ ರಜತೋತ್ಸವ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ನಿವೃತ್ತ ಉಪನ್ಯಾಸಕ ಡಾ. ಎಸ್.ಡಿ.ಹೆಗಡೆ, ಹಳದಿಪುರ ಗ್ರಾ.ಪಂ.ಸದಸ್ಯ ನವೀನ ಹಳದಿಪುರ, ಗಣೇಶ ಜೋಶಿ ಸಂಕೊಳ್ಳಿ ಇದ್ದರು.
ಉಮೇಶ ಭಟ್ಟ ಬಾಡ ಅವರು ಯಕ್ಷಗಾನ ಭಾಗವತಿಕೆಯಲ್ಲಿ ಪರಿಣತರು. ಅದಷ್ಟೇ ಅಲ್ಲ, ಬಡಗುತಿಟ್ಟಿನ ಸರ್ವಶ್ರೇಷ್ಠ ಕಲಾವಿದ ಕೋಟ ವೈಕುಂಠರಿಂದ ಹೆಜ್ಜೆಗಾರಿಕೆಯನ್ನೂ ಕಲಿತವರು. ನೃತ್ಯ, ಅಭಿನಯ, ಮದ್ದಳೆ, ಚೆಂಡೆ ವಾದನವೆಲ್ಲವನ್ನೂ ಬಲ್ಲ ನಿಜ ಅರ್ಥದ ಸವ್ಯಸಾಚಿ. ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದವರು.
ಸಾಲಿಗ್ರಾಮ ಮೇಳದ ನಂತರ ಶಿರಸಿ ಪಂಚಲಿಂಗ ಮೇಳ, ಬಚ್ಚಗಾರು ಮೇಳ, ಶಿರಸಿಯ ಮಾರಿಕಾಂಬಾ ಮೇಳ, ಮುಲ್ಕಿ ಮೇಳ, ಗೋಳಿ ಗರಡಿ ಮೇಳ, ಕುಮಟಾ ಮೇಳ, ಗುಂಡಬಾಳ ಮೇಳ ಹೀಗೆ ಹಲವು ಮೇಳಗಳಲ್ಲಿ ಎರಡು ದಶಕಗಳ ಪರ್ಯಂತ ಯಕ್ಷಗಾನ ಸೇವೆ ಸಲ್ಲಿಸಿದ್ದಾರೆ. ಇವರ ಯಕ್ಷ ಸೇವೆ ಪರಿಗಣಿಸಿ ಯಕ್ಷಗಾನ ಅಕಾಡೆಮಿಯ ಗೌರವ ಪುರಸ್ಕಾರ ನೀಡಿ ಗೌರವಿಸಿದೆ.