

ನರಗುಂದ: ದೇವರ ಬೆಳ್ಳಿ ಮೂರ್ತಿ ಕಳವಾದ ಘಟನೆ ಪಟ್ಟಣದ ದಂಡಾಪೂರ 6ನೇ ಗಲ್ಲಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕಾಳಮ್ಮ, ಗಣಪತಿ, ನಂದಿ ವಿಗ್ರಹ ಹೊಂದಿರುವ ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿದ್ದ ಅಂದಾಜು 25 ಸಾವಿರ ರೂ. ಮೌಲ್ಯದ 250 ಗ್ರಾಂ ತೂಕದ ಶ್ರೀ ವೀರಭದ್ರೇಶ್ವರರ ಬೆಳ್ಳಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ಸುಮಾರು 50 ವರ್ಷಗಳ ದೇವಸ್ಥಾನ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಶಿಥಿಲಗೊಂಡಿರುವ ದೇವಸ್ಥಾನದ ಜೀಣೋದ್ಧಾರ ಹಾಗೂ ಗೋಪುರ ನಿರ್ಮಾಣ ಕಾರ್ಯಕ್ಕೆ 3 ತಿಂಗಳ ಹಿಂದೆ ಚಾಲನೆ ನೀಡಿದ್ದರಿಂದ ದೇವಸ್ಥಾನ ಪಕ್ಕದಲ್ಲಿ ತಗಡಿನ ಶೆಡ್ ನಿರ್ವಿುಸಿ ವೀರಭದ್ರ ದೇವರ ವಿಗ್ರಹಗಳನ್ನಿಟ್ಟು ಎಂದಿನಂತೆ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ, ಮಂಗಳವಾರ ದೇವಸ್ಥಾನದ ಕಾಳಮ್ಮನಿಗೆ ಭಕ್ತರು ಬೆಳಗ್ಗೆಯಿಂದ ಉಡಿ ತುಂಬಲು ತಂಡೋಪತಂಡವಾಗಿ ಬರುತ್ತಿದ್ದರು. ಈ ವೇಳೆ ದೇವಸ್ಥಾನದ ಅರ್ಚಕ ಚನ್ನಬಸಯ್ಯ ಅಡಿವೆಯ್ಯ ಹಿರೇಮಠ ಸ್ವಲ್ಪ ಹೊತ್ತು ಹೊರಗಡೆ ಹೋಗಿ ಬರುವಷ್ಟರಲ್ಲಿ ಏಕಾಏಕಿ ಬೆಳ್ಳಿ ಮೂರ್ತಿ ಕಣ್ಮರೆಯಾಗಿದೆ. ವಿಚಿತ್ರವೆಂದರೆ ವೀರಭದ್ರೇಶ್ವರ ಕೈಯಲ್ಲಿ ಬೆಳ್ಳಿ ಖಡ್ಗ, ಬೆಳ್ಳಿ ಮೀಸೆ, ಬೆಳ್ಳಿಯ ಕಣ್ಣು ಮುಂತಾದ ಆಭರಣಗಳಿದ್ದರೂ, ಬೆಳ್ಳಿ ಮೂರ್ತಿ ಮಾತ್ರ ಕಳವು ಮಾಡಲಾಗಿದೆ. ವಾರದ ಹಿಂದೆ ಕಾಳಮ್ಮ ದೇವಿ ಕೊರಳಲ್ಲಿದ್ದ ಮಾಂಗಲ್ಯ ಸರ ಕಳವಾಗಿತ್ತು. ಆದರೆ, ಅದು ಬಂಗಾರದ್ದಾಗಿರಲಿಲ್ಲ ಎನ್ನಲಾಗಿದೆ.