ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಿ

29Kush06
Published on

ಕುಶಾಲನಗರ: ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕುಶಾಲನಗರ ತಾಲೂಕು ಮಾಜಿ ಸೈನಿಕರ ಸಂಘದ ಬೆಳ್ಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡು ಸಂಭ್ರಮಿಸಿದರು. ಸಮಾರಂಭ ಉದ್ಘಾಟಿಸಿದ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಮಾತನಾಡಿ, ದೇಶ ಸೇವೆ ಮಾಡಿ ನಿವೃತ್ತರಾದ ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.
ಕುಶಾಲನಗರ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಕರ್ನಲ್ ನಾರಾಯಣಮೂರ್ತಿ ಮಾತನಾಡಿ, ಸಂಘದ ವತಿಯಿಂದ ಸೇನೆಗೆ ಸೇರಲು ಯುವಜನಾಂಗವನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಸಂಘದಿಂದ ರಚನಾತ್ಮಕ ಚಟುವಟಿಕೆ ಕೈಗೊಳ್ಳಬೇಕು ಎಂದರು.

ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯೂ ಆದ ವಕೀಲ ಮೇಜರ್ ಚಿಂಗಪ್ಪ ಮಾತನಾಡಿ, ಮಾಜಿ ಸೈನಿಕರು ಸಂಘಟಿತರಾಗಬೇಕು. ಮಾಜಿ ಸೈನಿಕರ ಯೋಗಕ್ಷೇಮಕ್ಕಾಗಿ ರಚನೆಗೊಂಡಿರುವ ಜಿಲ್ಲಾ ಸಂಘದ ಸದಸ್ಯತ್ವವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಮಾಜಿ ಸೈನಿಕರಿಗೆ ಕಾನೂನು ಬಗ್ಗೆ ಸಲಹೆ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಬಿ.ಕೆ.ಚಿಣ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಸಂಘದ ಸಂಸ್ಥಾಪಕರು ಹಾಗೂ ಪದಾಧಿಕಾರಿಗಳ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.

ಇದೇ ಸಂದರ್ಭ ಸಂಘಕ್ಕೆ ಜಾಗವನ್ನು ದಾನವಾಗಿ ನೀಡಿದ ನಾಯಕ್ ಕೇದಂಬಾಡಿ ಸಣ್ಣಪ್ಪ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಬೋಜಪ್ಪ, ಪದಾಧಿಕಾರಿಗಳಾದ ಪೂವಯ್ಯ ಹಾಗೂ ಸೂರಪ್ಪ ಅವರು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಅರಣ್ಯಾಧಿಕಾರಿ ಮಂಡೇಪಂಡ ಬೋಸ್ ಮೊಣ್ಣಪ್ಪ, ಮಡಿಕೇರಿ ಗ್ರೂಪ್ ಕ್ಯಾಪ್ಟನ್ ಕೆ.ಎ.ಕಾರ್ಯಪ್ಪ, ಕುಶಾಲನಗರ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮನು ನಂಜುಂಡ, ಕಾರ್ಯದರ್ಶಿ ಎಸ್.ಆರ್.ಮಾದಪ್ಪ, ಖಜಾಂಚಿ ನರೇಶ್ ಕುಮಾರ್ ಉಪಸ್ಥಿತರಿದ್ದರು.ಬೆಳ್ಳಿ ಹಬ್ಬ ಹಿನ್ನೆಲೆ ವಿವಿಧ ಕ್ರೀಡಾ ಚಟುವಟಿಕೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಸೈನಿಕರು ಹಾಗೂ ದಿವಂಗತ ಸೈನಿಕರ ಪತ್ನಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net