

ಗಂಗಾವತಿ: ನಗರದ ರಾಯರ ಓಣಿಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಗುರುಸೌರ್ವಭೌಮರ ಉತ್ತರರಾಧನೆ ನಿಮಿತ್ತ ಮಹಾರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಶ್ರೀವಿಜಯ ವಿಠ್ಠಲ ಮಹಿಳಾ ಭಜನಾ ಮಂಡಳಿಯಿಂದ ಹರಿಕಥಾಮೃತಸಾರ ಪಾರಾಯಣ, ಡೋಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ನೈವೇದ್ಯ ಮತ್ತು ಹಸ್ತೋದಕ ಪ್ರಸಾದ ನೆರವೇರಿಸಲಾಯಿತು. ಮೃತ್ತಿಕಾ ವೃಂದಾವನವನ್ನು ಬೆಳ್ಳಿ ಕವಚ, ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು.
ಸರ್ವಾಲಂಕೃತಗೊಂಡ ನೂತನ ರಥವನ್ನು ರಾಯರ ಮಠದಿಂದ ಶ್ರೀ ಸುಂಕದಕಟ್ಟೆ ಪ್ರಾಣದೇವರ ದೇವಾಲಯದವರೆಗೂ ವಿವಿಧ ಭಜನಾ ಮಂಡಳಿಯ ಭಜನೆಯೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು.
ರಾಘವೇಂದ್ರ ಸ್ವಾಮಿಗಳ ಮಹಿಮೆ, ಆರಾಧನೆ ಮತ್ತು ರಥೋತ್ಸವ ಕುರಿತು ಹಿರಿಯ ಅರ್ಚಕ ವಿಠಲಾಪುರ ರಾಮಾಚಾರ್ ಮಾತನಾಡಿದರು. ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್, ನಗರಸಭೆ ಸದಸ್ಯ ವಾಸುದೇವ ನವಲಿ, ವಿಚಾರಣಕರ್ತ ರಾಮಕೃಷ್ಣ ಜಹಾಗೀರದಾರ್, ವಿಪ್ರ ಸಮಾಜದ ಮುಖಂಡರಾದ ನಾಗರಾಜಾಚಾರ್ ಸರ್‌ಜೋಶಿ, ವೆಂಕೋಬರಾವ್ ಹೇರೂರು, ಸತ್ಯನಾರಾಯಣರಾವ್ ದೇಶಪಾಂಡೆ, ಅಪ್ಪಣ್ಣ, ಲಕ್ಷ್ಮಿಕಾಂತ ಹೇರೂರು, ದಾಸನಾಳ್ ಶ್ರೀನಿವಾಸ, ವೈದ್ಯ ಡಾ.ಕೆ.ಎನ್.ಮಧುಸೂಧನ್, ನವಲಿ ಪ್ರಲ್ಹಾದರಾವ್ ಇತರರಿದ್ದರು.
ಆನೆಗೊಂದಿ: ತಾಲೂಕಿನ ಆನೆಗೊಂದಿಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಉತ್ತರರಾಧನೆ ನೆರವೇರಿಸಲಾಯಿತು. ಮೃತ್ತಿಕಾವೃಂದಾವನಕ್ಕೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಹಸ್ತೋದಕ ಮತ್ತು ಭಜನೆ ಮಂಡಳಿಯಿಂದ ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು.
ಆರಾಧನೆ ಕುರಿತು ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಇಡಪನೂರ್ ಮಾತನಾಡಿದರು. ಮಠಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಭೇಟಿ ನೀಡಿ ಮೃತ್ತಿಕಾ ವೃಂದಾವನದ ದರ್ಶನ ಪಡೆದುಕೊಂಡರು. ಅರ್ಚಕ ವಿಜಯಾಚಾರ್, ಕೆಆರ್‌ಪಿಪಿ ಮುಖಂಡರಾದ ಯಮನೂರ ಚೌಡ್ಕಿ, ವೀರೇಶ ಬಲ್ಕುಂದಿ, ಅಲಿಖಾನ್ ಇತರರಿದ್ದರು.