

ಜಿ.ನಾಗರಾಜ್ ಬೂದಿಕೋಟೆ
ಕರೊನಾ ಭೀತಿಯಿಂದ ಚೀನಾ ರೇಷ್ಮೆ ಆಮದು ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಸ್ವದೇಶಿ ರೇಷ್ಮೆ ಗೂಡಿನ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿದೆ.
ಏಷ್ಯಾ ಖಂಡದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದ್ದು, ಭಾರತ ನಂತರದ ಸ್ಥಾನದಲ್ಲಿ ಮುಂದುವರಿದಿದೆ. ಕರೊನಾ ಕಾಟ ಆ ದೇಶದ ರೇಷ್ಮೆ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಚೀನಾ ರೇಷ್ಮೆ ಆಮದು ಇಳಿಮುಖವಾಗಿರುವುದರಿಂದ ಭಾರತದಲ್ಲಿ ಭಾರೀ ಬೇಡಿಕೆ ಬಂದಿದೆ.
ಚೀನಾದಿಂದ ಆಮದಾಗುತ್ತಿದ್ದ ರೇಷ್ಮೆ ಸೇರಿ ಹಲವು ಉತ್ಪನ್ನಗಳಿಗೆ ಸರ್ಕಾರ ತಡೆ ನೀಡಿರುವುದರಿಂದ ರಾಜ್ಯದಲ್ಲಿ ಗೂಡಿನ ಬೆಲೆ ದಿಢೀರ್ ಏರಿಕೆ ಕಂಡಿದೆ.
ಕೋಲಾರ ಮತ್ತು ಕ್ಯಾಲನೂರು ರೇಷ್ಮೆ ಮಾರುಕಟ್ಟೆಯಲ್ಲಿ ಬಿಳಿ ರೇಷ್ಮೆ ಗೂಡು ಒಂದು ಕೆಜಿ ಸುಮಾರು 420ರಿಂದ 600 ರೂ.ವರೆಗೆ ಹರಾಜಾಗುತ್ತಿದೆ. ಮಿಶ್ರತಳಿ ಗೂಡು ಪ್ರತಿ ಕೆಜಿಗೆ ಸುಮಾರು 500 ರೂ.ವರೆಗೆ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಬಂಗಾರಪೇಟೆ ತಾಲೂಕಿನ ರೇಷ್ಮೆ ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ನಾಟಿ ಮತ್ತು ನಿರ್ವಹಣೆ ಮಾಡಲು ನರ್ಸರಿ ಸೇರಿ ಹಲವಾರು ಕಾರ್ಯಕ್ರಮಗಳಿಗೆ ಸುಮಾರು 4.5 ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದೆ. ಇಲಾಖೆಯಿಂದ ವೈಜ್ಞಾನಿಕ ತಾಂತ್ರಿಕ ಸಲಹೆ ಮತ್ತು ಅನುದಾನ ಪಡೆದ ರೈತರು ಗುಣಮಟ್ಟದ ರೇಷ್ಮೆ ಬೆಳೆದಿದ್ದು, ಗೂಡಿಗೆ ಚಿನ್ನದಂಥ ಬೆಲೆ ಸಿಕ್ಕಿರುವ ಕಾರಣ ಸಂತಸ ವ್ಯಕ್ತಪಡಿಸಿದ್ದಾರೆ.
ರೈತರು ತರಕಾರಿ ಬೆಳೆಯಲು ಗಮನಹರಿಸುತ್ತಾರೆ. ಹಿಪ್ಪುನೇರಳೆ ಕಡೆ ಗಮನ ಹರಿಸುತ್ತಿಲ್ಲ. ಈಗ ರೇಷ್ಮೆಗೆ ಉತ್ತಮ ಧಾರಣೆ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಲೆ ಸಿಗುವುದರಿಂದ ಹಿಪ್ಪುನೇರಳೆ ತೋಟ ಅಭಿವೃದ್ಧಿಪಡಿಸಬೇಕು. ಶ್ರೀನಿವಾಸ್, ಉಪನಿರ್ದೇಶಕ, ರೇಷ್ಮೆ ಇಲಾಖೆ ಬಂಗಾರಪೇಟೆ ಕರೊನಾ ಭೀತಿಯಿಂದ ಚೀನಾ ರೇಷ್ಮೆ ಆಮದು ನಿಂತಿರುವ ಕಾರಣ ಉತ್ತಮ ಬೆಲೆ ಸಿಕ್ಕಿದೆ. ಕಷ್ಟಪಟ್ಟು ಬೆಳೆದ ರೇಷ್ಮೆ ಬೆಳೆಗೆ ಮೂರು ಕಾಸು ಸಿಗುವಂತಾಗಿದೆ. ರೈತರು ತರಕಾರಿ ಬೆಳೆಗಳಿಗೆ ಮಾತ್ರ ಸೀಮಿತವಾಗದೆ ರೇಷ್ಮೆ ಬೆಳೆಯಲು ಮುಂದಾಗಬೇಕು. ರಾಮಪ್ಪ, ರೈತ ಮೂತನೂರು ಗ್ರಾಮ