ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ರೇಷ್ಮೆ ಮಾರುಕಟ್ಟೆ ಮತ್ತೆ ಕಾರ‌್ಯಾರಂಭ

2-klr-1
Published on

ಕೋಲಾರ: ಕರೊನಾ ಸೋಕು ಹರಡುವುದನ್ನು ತಪ್ಪಿಸುವ ಸಲುವಾಗಿ ಭಾರತ್ ಲಾಕ್‌ಡೌನ್ ಜಾರಿ ನಂತರ ಜಿಲ್ಲೆಯಲ್ಲಿ ಮಾ.25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಗುರುವಾರ ಕಾರ್ಯಾರಂಭ ಮಾಡಿದೆ.

ಅದರಂತೆ ಕೋಲಾರ, ಕ್ಯಾಲನೂರು ಮತ್ತು ಶ್ರೀನಿವಾಸಪುರ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ತೆರೆದು ವಹಿವಾಟು ಆರಂಭಿಸಿದವು. ಮೊದಲ ದಿನ ಕೋಲಾರ ಮಾರುಕಟ್ಟೆಗೆ ಮಿಶ್ರತಳಿ 15 ಲಾಟ್, 634.640 ಕೆಜಿ (ಕನಿಷ್ಠ 200 ರೂ, ಗರಿಷ್ಠ 319 ರೂ) ಹಾಗೂ ಬೈವೋಲ್ಟಿನ್ 30 ಲಾಟ್, 2247.830 ಕೆಜಿಗೆ (ಕನಿಷ್ಠ 300 ರಿಂದ ಗರಿಷ್ಠ 370 ರೂ.)ಗೆ ಹರಾಜು ಕಂಡಿತ್ತು. ಶ್ರೀನಿವಾಸಪುರದಲ್ಲಿ ಮಿಶ್ರತಳಿ 1 ಲಾಟ್, 49.270 ಕೆಜಿ (294 ರೂ.) ವಹಿವಾಟು ನಡೆಯಿತು.

ಪಾಸ್, ಐಡಿಕಾರ್ಡ್ ವಿತರಣೆಗೆ ಸೂಚನೆ: ನಗರದ ಸರ್ಕಾರಿ ಗೂಡು ಮಾರುಕಟ್ಟೆಗೆ ಜಿಪಂ ಸಿಇಒ ಎಚ್.ವಿ.ದರ್ಶನ್ ಭೇಟಿ ನೀಡಿ ಇಲಾಖೆ ಅಧಿಕಾರಿಗಳು, ರೈತರು ಮತ್ತು ರೀಲರ್ಸ್‌ಗಳಿಂದ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ, ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಗೂಡು ತರಬೇಕಿರುವುದರಿಂದ ತಡೆದು ವಾಪಸ್ ಕಳುಹಿಸದಂತೆ ಪೊಲೀಸರಿಗೆ ಸೂಚಿಸಬೇಕು ಎಂದರು.

ರೀಲರ್ಸ್‌ ಅಸೋಸಿಯೇಷನ್ ಮುಖಂಡ ಸಾಬೀರ್‌ಪಾಷಾ ಮಾತನಾಡಿ, ಮಾರುಕಟ್ಟೆ ಆರಂಭದಿಂದ ಅನುಕೂಲ ಆಗಿದೆ. ರೀಲರ್ಸ್‌ಗಳು ಮಾರುಕಟ್ಟೆಗೆ ಬರುವಾಗ ಹಾಗೂ ಗೂಡನ್ನು ತೆಗೆದುಕೊಂಡು ಹೋಗುವಾಗ ಪೊಲೀಸರು ಅಡ್ಡಿಪಡಿಸುವುದರಿಂದ ಪಾಸ್ ವ್ಯವಸ್ಥೆ ನೀಡಬೇಕು, ಲಾಕ್‌ಡೌನ್ ವೇಳೆ ಪೊಲೀಸರು ನೂಲು ಬಿಚ್ಚಾಣಿಕೆ ಕಾರ್ಖಾನೆಗೆ ನುಗ್ಗಿ ಕಾರ್ಮಿಕರಿಗೆ ತೊಂದರೆ ನೀಡಿ ಕಾರ್ಖಾನೆ ಮುಚ್ಚಿದ್ದಾರೆ. ಇದಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು.

ಸಿಲ್ಕ್ ರೀಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಅಪ್ಸರ್ ಮಾತನಾಡಿ, ಸೊಸೈಟಿಯಲ್ಲಿ 40 ಲಕ್ಷ ರೂ. ಇದೆ, ಇದನ್ನು ಬಳಸಿಕೊಳ್ಳಲು ರೇಷ್ಮೆ ಇಲಾಖೆ ಆಯುಕ್ತರಿಂದ ಅನುಮತಿ ಕೊಡಿಸುವಂತೆ ಮನವಿ ಮಾಡಿದರು.

ಸ್ಪಂದಿಸಿದ ಸಿಇಒ ಎಚ್.ವಿ.ದರ್ಶನ್, ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ರೈತರು, ರೀಲರ್ಸ್‌ಗಳಿಗೆ ಗೂಡು ಸಾಗಾಟಕ್ಕೆ ಅಡ್ಡಿಪಡಿಸಬಾರದು, ದೊಡ್ಡ ವಾಹನಗಳಿಗೆ ನಗರಠಾಣೆಯಲ್ಲಿ ಪಾಸ್ ವಿತರಿಸಬೇಕು ಎಂದರು.

ಸ್ಥಳೀಯವಾಗಿ ಬೈಕ್, ಆಟೋಗಳಲ್ಲಿ ರೇಷ್ಮೆ ಗೂಡು ಸಾಗಾಟ ಮಾಡುವವರಿಗೆ ರೇಷ್ಮೆ ಇಲಾಖೆಯಿಂದ ಐಡಿ ಕಾರ್ಡ್ ವಿತರಿಸುವಂತೆ ಉಪ ನಿರ್ದೇಶಕರಿಗೆ ಸೂಚಿಸಿದರು. ಸೊಸೈಟಿ ಹಣ ಬಳಕೆ ಸಂಬಂಧ ಆಯುಕ್ತರ ಜತೆ ಚರ್ಚಿಸುವ ಭರವಸೆ ನೀಡಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಕೆ. ಪ್ರಭಾಕರ್, ಸಹಾಯಕ ನಿರ್ದೇಶಕ ಮಂಜುನಾಥ್, ಗೂಡು ಮಾರುಕಟ್ಟೆ ಸಹಾಯಕ ಅಧಿಕಾರಿ ರೆಡ್ಡಿಲಕ್ಷ್ಮೀ, ರೇಷ್ಮೆ ಬೆಳೆಗಾರರ ಸಂಘದ ನಿರ್ದೇಶಕ ನಾಗನಾಳ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಅಯ್ಯಪ್ಪ, ರೇಷ್ಮೆ ಮಂಡಳಿ ಮಾಜಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net