

ಮಡಿಕೇರಿ:
ಒಂದೊಮ್ಮೆ ರೇಷ್ಮೆ ಕೃಷಿಯಲ್ಲಿ ಹೆಸರು ಮಾಡಿದ್ದ ಕೊಡಗು ಮತ್ತೊಮ್ಮೆ ಗತ ವೈಭವಕ್ಕೆ ಮರಳುವ ಲಕ್ಷಣಗಳು ಕಾಣಿಸುತ್ತಿದೆ. ಅವಿಭಜಿತ ಸೋಮವಾರಪೇಟೆ ತಾಲೂಕು ಕೇಂದ್ರೀಕೃತವಾಗಿ ಹಿಪ್ಪುನೇರಳೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತಾರ ಆಗುತ್ತಿದೆ. ರೇಷ್ಮೆ ಗೂಡು ಉತ್ಪಾದನೆ ಪ್ರಮಾಣದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಅನ್ನಿಸಿದರೂ ರೇಷ್ಮೆ ಇಲಾಖೆಯನ್ನು ಬಲಿಷ್ಠಪಡಿಸುವುದರ ಜತೆಗೆ ಇಲಾಖೆಯ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪಿದರೆ ಇನ್ನೂ ಹೆಚ್ಚಿನ ಸಾಧನೆ ನಿರೀಕ್ಷಿಸಬಹುದಾಗಿದೆ.
ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ ಸಾಂಪ್ರದಾಯಿಕ ಬೆಳೆ ಅನ್ನಿಸಿಕೊಂಡಿದ್ದ ಕೊಡಗಿನಲ್ಲಿ ನಾಲ್ಕು ದಶಕಗಳ ಹಿಂದೆ ರೇಷ್ಮೆಯೂ ಜನಪ್ರಿಯ ಬೆಳೆ ಆಗಿತ್ತು. ಜಿಲ್ಲೆಯ ಮೂರು ತಾಲೂಕುಗಳಲ್ಲೂ ರೇಷ್ಮೆ ಕೃಷಿ ನಡೆಯುತ್ತಿತ್ತು. ಅದರಲ್ಲೂ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಉತ್ಪಾದನೆ ಆಗುತ್ತಿತ್ತು. ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಸುಸಜ್ಜಿತ ರೇಷ್ಮೆ ಮಾರುಕಟ್ಟೆಯೂ ಇತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ೨ ದಶಕಗಳ ಹಿಂದೆ ರೇಷ್ಮೆ ಗೂಡು ಉತ್ಪಾದನೆ ಶೂನ್ಯ ಪ್ರಮಾಣಕ್ಕೆ ಇಳಿದುಬಿಟ್ಟಿತ್ತು.
ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ಪ್ರದೇಶ ಮಾಯ ಆಗುತ್ತಿದ್ದಂತೆಯೇ ಕುಶಾಲನಗರದಲ್ಲಿ ಇದ್ದ ರೇಷ್ಮೆ ಮಾರುಕಟ್ಟೆ ಬಂದ್ ಆಯಿತು. ಆ ಕಟ್ಟಡದಲ್ಲಿ ಈಗ ಕುಶಾಲನಗರ ಗ್ರಾಮಾಂತರ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಗೆ ಇದ್ದ ರೇಷ್ಮೆ ಉಪ ನಿರ್ದೇಶಕರ ಹುದ್ದೆಯೂ ರದ್ದಾಯಿತು. ನಂತರದ ದಿನಗಳಲ್ಲಿ ಇಲಾಖೆಯಿಂದ ವರ್ಗ ಆದ, ನಿವೃತ್ತರಾದ ಸಿಬ್ಬಂದಿ ಜಾಗಕ್ಕೆ ಬದಲಿ ನೇಮಕವೂ ಆಗಿಲ್ಲ. ಹಾಗಾಗಿ ಬೆರಳೆಣಿಕೆಯಷ್ಟೇ ಸಿಬ್ಬಂದಿ ಉಳಿದುಕೊಂಡರು. ಕೊಡಗಿನಲ್ಲಿ ರೇಷ್ಮೆ ಕೃಷಿ ಇನ್ನು ಕೇವಲ ನೆನಪಾಗಿ ಉಳಿಯಲಿದೆ ಎಂದುಕೊಳ್ಳುವಷ್ಟರಲ್ಲಿ ಕೆಲವು ಉತ್ಸಾಹಿ ಅಧಿಕಾರಿಗಳು ಕಳೆದ ಕೆಲವು ವರ್ಷಗಳಿಂದ ರೇಷ್ಮೆಗೆ ಮತ್ತೆ ಜೀವ ಕೊಡುವ ಕೆಲಸ ಶುರು ಮಾಡಿರುವುದು ನಿಧಾನಕ್ಕೆ ಫಲ ಕೊಡಲಾರಂಭಿಸಿದೆ.
ಇಲಾಖೆ ಮಾರ್ಗದರ್ಶನದಲ್ಲಿ ಯೋಜನಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ರೇಷ್ಮೆ ಕೃಷಿ ಮಾಡಿದರೆ ಪ್ರತಿ ತಿಂಗಳು ನಿಯಮಿತ ಆದಾಯ ಗಳಿಸಬಹುದು ಎನ್ನುವ ಅಧಿಕಾರಿಗಳು, ರೇಷ್ಮೆ ಕೃಷಿ ಉತ್ತೇಜಿಸಲು ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸುತ್ತಾ, ಎಲ್ಲಾ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುತ್ತಾ ಪ್ರೋತ್ಸಾಹ ನೀಡುತ್ತಿರುವುದರಿಂದ ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಕೆಲವು ರೈತರು ರೇಷ್ಮೆ ಕೃಷಿಯ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡು ಯಶಸ್ವಿಯಾಗಿದ್ದಾರೆ. ಈ ಭಾಗದ ರೇಷ್ಮೆ ಬೆಳೆಗಾರರು ಮಾದರಿ ಎನ್ನುವಂತೆ ಗೂಡು ಉತ್ಪಾದನೆಯಲ್ಲಿ ದಾಖಲೆ ಮಾಡುತ್ತಿದ್ದಾರೆ.
ಕೊಡಗಿನಲ್ಲಿ ರೇಷ್ಮೆ ಕಷಿ ಮತ್ತೆ ಪ್ರವರ್ಧಮಾನಕ್ಕೆ ಬರಬೇಕು. ಈ ಮೂಲಕ ರೈತರಿಗೆ ಬದಲಿ ಆದಾಯದ ಮೂಲ ಗಟ್ಟಿ ಮಾಡಿಕೊಡಬೇಕು ಎನ್ನುವ ರೇಷ್ಮೆ ಇಲಾಖೆ ಅಧಿಕಾರಿಗಳ ಸಂಕಲ್ಪ ಒಳ್ಳೆಯ ದಿಕ್ಕಿನಲ್ಲಿ ಸಾಗುವ ಸೂಚನೆ ಸಿಕ್ಕಿದೆ. ಜಿಲ್ಲೆಯಲ್ಲಿ ಮತ್ತೆ ರೇಷ್ಮೆ ಕಷಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಉತ್ಸಾಹಿ ಅಧಿಕಾರಿಗಳು ಮತ್ತು ಸಿಬ್ಬಂದಿ ಫೀಲ್ಡ್‌ಗೆ ಇಳಿದ ಪರಿಣಾಮ ಮತ್ತು ರೈತರ ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಮನವೊಲಿಸಿದ್ದರ ಫಲವಾಗಿ ರೇಷ್ಮೆ ಗೂಡು ಉತ್ಪಾದನೆಯ ಪ್ರಮಾಣದಲ್ಲಿ ಚೇತರಿಕೆ ಕಂಡುಬರುತ್ತಿದೆ. ಇದರಿಂದಾಗಿ ಉಳಿದ ತಾಲೂಕುಗಳಿಗೂ ಬೆಳೆ ವಿಸ್ತರಿಸಲು ಅಧಿಕಾರಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ.
ಜಿಲ್ಲೆಯಲ್ಲಿ ೬ ಎಕರೆಗೆ ಇಳಿದಿದ್ದ ಹಿಪ್ಪುನೇರಳೆ ಬೆಳೆ ಈಗ ಸುಮಾರು ೨೦ ಎಕರೆಗೆ ತಲುಪಿದೆ. ಕೇವಲ ಇಬ್ಬರೇ ಇದ್ದ ಬೆಳೆಗಾರರ ಸಂಖ್ಯೆ ೨೫ನ್ನು ಮೀರಿದೆ. ೬೦-೭೦ ಕೆಜಿಯಷ್ಟಿದ್ದ ವಾರ್ಷಿಕ ರೇಷ್ಮೆ ಗೂಡು ಉತ್ಪಾದನೆ ೬೦೦ ಕೆ.ಜಿ. ದಾಟಿದೆ. ವರ್ಷದಿಂದ ವರ್ಷಕ್ಕೆ ರೇಷ್ಮೆ ಗೂಡಿನ ಉತ್ಪಾದನೆಯ ಪ್ರಮಾಣ ಹೆಚ್ಚುತ್ತಲೇ ಬರುತ್ತಿರುವುದನ್ನು ೨೦೧೭-೧೮ರಿಂದಲೇ ಗಮನಿಸಬಹುದಾಗಿದೆ.
ಸದ್ಯಕ್ಕೆ ಅವಿಭಜಿತ ಸೋಮವಾರಪೇಟೆ ತಾಲೂಕಿನ ಮೇಲೆ ಇಲಾಖೆ ಗಮನ ಕೇಂದ್ರೀಕರಿಸಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆಯ ವಿವಿಧೆಡೆಗೂ ಚಟುವಟಿಕೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಈ ಹಿಂದೆ ರೇಷ್ಮೆ ಬೆಳೆಯುತ್ತಿದ್ದವರನ್ನು ಇಲಾಖೆ ವತಿಯಿಂದ ಸಂಪರ್ಕಿಸುವುದಲ್ಲದೆ ಮತ್ತೆ ಹೊಸದಾಗಿ ರೇಷ್ಮೆ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಹಲವು ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ರೇಷ್ಮೆ ಬೆಳೆಗಾರರನ್ನು ಕಾಣಬಹುದಾಗಿದೆ ಎನ್ನುವುದು ಅಧಿಕಾರಿಗಳ ವಿಶ್ವಾಸದ ನುಡಿ.
ಕೊಡಗಿನಲ್ಲಿ ರೇಷ್ಮೆ ಕೃಷಿ ಉತ್ತುಂಗದಲ್ಲಿ ಇದ್ದ ಸಮಯದಲ್ಲಿ ಕಾಫಿಗೆ ಹೆಚ್ಚಿನ ಬೆಲೆ ಬಂತು. ಇದರ ಜತೆಗೆ ಆಗಿನ ಅಧಿಕಾರಿಗಳ ನಿರ್ಲಕ್ಷ್ಯವೂ ರೈತರಲ್ಲಿ ಬೇಸರ ಮೂಡಿಸಿತ್ತು. ಶುಂಠಿ ಕಷಿಯ ಪ್ರಭಾವೂ ಜಿಲ್ಲೆಯ ರೇಷ್ಮೆ ಕೃಷಿಯ ಮೇಲೆ ವ್ಯತಿರ‌್ಯಿಕ್ತ ಪರಿಣಾಮ ಬೀರಿತು. ರೇಷ್ಮೆ ಗೂಡು ಉತ್ಪಾದನೆ ೩೦೦ ಕೆಜಿಗಿಂತಲೂ ಕಡಿಮೆಗೆ ಇಳಿದಾಗ ಕುಶಾಲನಗರದಲ್ಲಿ ಇದ್ದ ಮಾರುಕಟ್ಟೆಯೂ ಮುಚ್ಚಿ ಹೋಯಿತು. ನಂತರದ ದಿನಗಳಲ್ಲಿ ರಾಮನಗರ, ಬೆಂಗಳೂರು ಅವಲಂಬನೆ ಅನಿವಾರ್ಯ ಆದ ಕಾರಣ ಉಳಿದ ರೈತರೂ ರೇಷ್ಮೆ ಕಷಿ ಕೈಬಿಟ್ಟರು. ಈಗ ಜಿಲ್ಲೆಯಲ್ಲಿ ಬಿತ್ತನೆ ತಳಿಯ ಗೂಡು ಉತ್ಪಾದನೆ ಮಾಡಲಾಗುತ್ತಿದೆ. ಉತ್ತಮ ಬೇಡಿಕೆಯೂ ಇದೆ. ಹಾಸನ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡಬಹುದು. ಅಗತ್ಯ ಸಿಬ್ಬಂದಿ ಜೊತೆ ಇಲಾಖೆ ಸದಢವಾದರೆ ರೇಷ್ಮೆ ಕಷಿಯಲ್ಲಿ ಮತ್ತಷ್ಟು ಸಾಧನೆ ಜಿಲ್ಲೆಯಲ್ಲಿ ನಿರೀಕ್ಷಿಸಬಹುದು.