

ಚಿಕ್ಕಬಳ್ಳಾಪುರ: ಒಳ್ಳೆಯ ಬೇಡಿಕೆ ಮತ್ತು ಬೆಲೆ ಇರುವ ಸಂದರ್ಭದಲ್ಲಿ ಹಿಪ್ಪು ನೇರಳೆ ಸೊಪ್ಪಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತಿರುವುದು ರೇಷ್ಮೆ ಬೆಳೆಗಾರರ ತಲೆ ನೋವಿಗೆ ಕಾರಣವಾಗಿದೆ. ಮೋಡ ಮುಸುಕಿದ ವಾತಾವರಣದ ನಡುವೆ ಹಿಪ್ಪು ನೇರಳೆ ಸೊಪ್ಪಿಗೆ ನುಸಿ ರೋಗ, ಕೆಂಪುಹುಳ ತಲೆ ಹುಳು, ಹೊಸದಾಗಿ ಜರಿಹುಳು ಕಾಟ ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ನುಗ್ಗತಹಳ್ಳಿಯ ಎಂ.ಆರ್.ವಾಸುದೇವ್‌ಗೆ ಸೇರಿದ ಮಂಚೇನಹಳ್ಳಿಯಲ್ಲಿನ ತೋಟ, ನಂದಿಯ ಮಂಜುನಾಥ್ ತೋಟದಲ್ಲಿ ಹುಳುವಿನ ಸಮಸ್ಯೆ ಪರಿಹಾರಕ್ಕೆ ಪರದಾಡಲಾಗುತ್ತಿದೆ. ಇನ್ನು ಅಂಗಟ್ಟ, ಯಲುವಹಳ್ಳಿ, ನಂದಿ ಸೇರಿ ವಿವಿಧ ಭಾಗಗಳಲ್ಲೂ ಹುಳುವಿನ ಕಾಟ ಕಾಡುತ್ತಿರುವ ಮಾತುಗಳು ಕೇಳಿ ಬಂದಿವೆ.
ಸೊಪ್ಪಿನ ದರ ಏರಿಕೆ:ಪ್ರಸ್ತುತ ರೇಷ್ಮೆ ಸೊಪ್ಪಿನ ದರ ಏರಿಕೆಯಾಗಿದೆ. ಕಳೆದ 15 ದಿನಗಳ ಹಿಂದೆ ಮೂಟೆ 300ರಿಂದ 350 ರೂ.ಗಳಿಗೆ ಮಾರಾಟವಾಗುತ್ತಿತ್ತು. ಆದರೆ, ಇದೀಗ 400ರಿಂದ 450 ರೂ. ದರ ಇದೆ. ಮಳೆಯಿಂದ ಹಲವೆಡೆ ಸೊಪ್ಪು ನಾಶವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೇಷ್ಮೆ ಕೃಷಿಕರು ಹುಳು ಸಾಕಾಣೆಗೆ ದೇವನಹಳ್ಳಿ, ಶಿಡ್ಲಘಟ್ಟ, ವಿಜಯಪುರ ಸೇರಿ ವಿವಿಧೆಡೆ ತೆರಳಿ ದುಬಾರಿ ದರಕ್ಕೆ ಖರೀದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 16,218 ಮಂದಿ ರೇಷ್ಮೆ ಬೆಳೆಗಾರರಿದ್ದು, 14,158 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಸೊಪ್ಪನ್ನು ಬೆಳೆಯಲಾಗುತ್ತದೆ. ಆದರೆ, ಈಗ ಪೂರೈಕೆ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದ್ದು, ನೂರು ಮೊಟ್ಟೆ ರೇಷ್ಮೆ ಹುಳು ಸಾಕಲು ಕನಿಷ್ಠ 35 ಮೂಟೆಗಳ ಸೊಪ್ಪು ಅಗತ್ಯವಿದೆ. ಇದಕ್ಕೆ ಕೇವಲ ಸೊಪ್ಪಿಗೆ ಸಾವಿರಾರು ಖರ್ಚು ಮಾಡುವಂತಾಗವಂತಾಗಿದೆ. ಧಾರಾಕಾರ ಮಳೆಗೆ ಬೆಳೆ ನಾಶ, ನಾನಾ ರೋಗಗಳು ಮತ್ತು ಹುಳುಗಳ ಸಮಸ್ಯೆಯಿಂದ ಹಿಪ್ಪು ನೇರಳೆ ಸೊಪ್ಪಿನ ಅಭಾವ ಸೃಷ್ಟಿಯಾಗಿರುವುದು ದರ ಏರಲು ಪ್ರಮುಖ ಕಾರಣವಾಗಿದೆ.
ಹಿಪ್ಪು ನೇರಳೆ ಸೊಪ್ಪಿನಲ್ಲಿ ಕಂಡು ಬರುತ್ತಿರುವ ಹೊಸ ತಳಿಯ ಹುಳುವಿನ ಸಮಸ್ಯೆ ಪರಿಹಾರಕ್ಕೆ ಔಷಧಗಳನ್ನು ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ರೇಷ್ಮೆ ಇಲಾಖೆಯ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ರೈತರು ನಷ್ಟ ಅನುಭವಿಸದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು.ಯಲುವಹಳ್ಳಿ ಮಂಜುನಾಥ್, ರೇಷ್ಮೆ ಕೃಷಿಕ
ಅತಿವೃಷ್ಟಿ, ಹುಳು ಕಾಟ ಸೇರಿ ನಾನಾ ಸಮಸ್ಯೆಗಳಿಂದ ರೇಷ್ಮೆ ಸೊಪ್ಪು ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ರೇಷ್ಮೆ ಸೊಪ್ಪಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿದೆ.ರಾಮಾಂಜಿ, ರೇಷ್ಮೆ ಕೃಷಿಕ