

ಚಿಕ್ಕಬಳ್ಳಾಪುರ: ಎರಡು ಪಟ್ಟು ಬೆಲೆಗೆ ಖರೀದಿಸುವ ನೆಪದಲ್ಲಿ ರೇಷ್ಮೆ ಗೂಡನ್ನು ಪಡೆದುಕೊಂಡು ಇಬ್ಬರು ಅಸಾಮಿಗಳು ರೈತನನ್ನು ವಂಚಿಸಿ, ಪರಾರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟದ ಮುನಿರಾಜು (50 ವರ್ಷ) ವಂಚನೆಗೊಳಗಾದವರು. ಶಿಡ್ಲಘಟ್ಟದ ಸೈಪು ಮತ್ತು ಸಾಧಿಕ್ ವಿರುದ್ಧ ವಂಚನೆಯ ದೂರು ದಾಖಲಿಸಿದ್ದಾರೆ.
ದ್ವಿ ಚಕ್ರ ವಾಹನದಲ್ಲಿ ಮುನಿರಾಜು ಹಂಡಿಗನಾಳ ಕೆರೆ ಕಟ್ಟೆಯ ಮೇಲೆ ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ಇಬ್ಬರು ಆರೋಪಿಗಳು, ರೇಷ್ಮೆ ಗೂಡನ್ನು ಮಾರಲು ಒತ್ತಡ ಹೇರಿದ್ದಾರೆ. ಇದಕ್ಕೆ ನಿರಾಕರಿಸಿದರೂ ಮಾರುಕಟ್ಟೆಗಿಂತಲೂ ಎರಡು ಪಟ್ಟು ಬೆಲೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಶಿಡ್ಲಘಟ್ಟಗೆ ಕರೆದುಕೊಂಡು ಉತ್ಪನ್ನವನ್ನು ತೂಕ ಹಾಕಿಸಿದ್ದು ಇದಕ್ಕೆ ಹಣ ನೀಡಲು ಎಟಿಎಂ ಹೋಗಿ ಬರುವುದಾಗಿ ಹೇಳಿದವರು ಮತ್ತೆ ಕಾಣಿಸಿಕೊಂಡಿಲ್ಲ. ಹಲವು ಬಾರಿ ಖರೀದಿಯ ಹಣವನ್ನು ನೀಡಲು ಒತ್ತಾಯಿಸಿದರೂ ಕೊಟ್ಟಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.