ಲಕ್ಷ್ಮೇಶ್ವರದಲ್ಲಿ ರೇಷ್ಮೆ ಸಲಹಾ ಕೇಂದ್ರ ಕಚೇರಿ ಉದ್ಘಾಟನೆ

silk
Published on

ಲಕ್ಷ್ಮೇಶ್ವರ: ಪಟ್ಟಣದ ತಾಪಂ ಕಟ್ಟಡದಲ್ಲಿ ರೇಷ್ಮೆ ಇಲಾಖೆಯ ತಾಂತ್ರಿಕ ಸಲಹಾ ಕೇಂದ್ರದ ಕಚೇರಿಯನ್ನು ಶಾಸಕ ಡಾ.ಚಂದ್ರು ಲಮಾಣಿ ಸೋಮವಾರ ಉದ್ಘಾಟಿಸಿ ರೇಷ್ಮೆ ಬೆಳೆಗಾರರಿಗೆ ವಿವಿಧ ಪರಿಕರಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ‘ಕಚೇರಿ ಉದ್ಘಾಟನೆಯಿಂದಾಗಿ ರೈತರ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಲಕ್ಷ್ಮೇಶ್ವರದಲ್ಲಿದ್ದ ರೇಷ್ಮೆ ಇಲಾಖೆ ಕಚೇರಿಯನ್ನು ಎರಡು ವರ್ಷಗಳ ಹಿಂದೆ ಬಂದ್ ಮಾಡಲಾಗಿತ್ತು. ಇದರಿಂದ ಈ ಭಾಗದ ಬೆಳೆಗಾರರಿಗೆ ತೊಂದರೆಯಾಗಿದ್ದು ಈ ಬಗ್ಗೆ ಕಚೇರಿಯ ಅವಶ್ಯಕತೆ ಮತ್ತು ಇಲ್ಲಿರುವ ಬೆಳೆಗಾರರಿಗೆ ಇದರಿಂದ ಆಗುವ ಪ್ರಯೋಜನವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಂಜೂರಿ ಮಾಡಿಸುವ ಕಾರ್ಯ ಮಾಡಿದ್ದೇನೆ’ ಎಂದರು.

ಶಿರಹಟ್ಟಿಯ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಪವಿತ್ರಾ ವಗ್ಗಣ್ಣವರ ಮಾತನಾಡಿ, ತಾಲೂಕಿನಲ್ಲಿ ಅಂದಾಜು 80ಕ್ಕಿಂತ ಹೆಚ್ಚು ರೇಷ್ಮೆ ಬೆಳೆಗಾರರಿದ್ದು ಅವರಿಗೆ ಸಲಹೆ ಸೂಚನೆ, ಉಪಕರಣಗಳು, ಚಂದ್ರಿಕೆ ಇತ್ಯಾದಿಗಳನ್ನು ನೀಡಲಾಗುತ್ತದೆ ಎಂದರು.

ತಹಸೀಲ್ದಾರ್ ವಾಸುದೇವ ವಿ. ಸ್ವಾಮಿ, ತಾಪಂ ಇಒ ಧರ್ಮರ ಕೃಷ್ಣಪ್ಪ, ಮಂಜನಾಥ ಗೌಡರ, ಕೇಶವ ಹಾವಿನಾಳ, ಪಿ.ಜಿ. ಕೊಳಲ, ಎನ್.ಸಿ. ಬಳಿಗಾರ, ಎಂ.ವಿ. ದೊಡ್ಡಮನಿ, ಎಂ.ಎಂ. ಕಳ್ಳಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net