ತಿ.ನರಸೀಪುರದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ

28 sep tnp 01
ತಿ.ನರಸೀಪುರ ತಾಲೂಕು ಆಡಳಿತ ಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿ, ಭ್ರಷ್ಟಾಚಾರ ನಡೆಸದಿದ್ದರೂ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ದಸಂಸ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಬೆಂಬಲಿಗರು ಕಪ್ಪು ಪಟ್ಟಿ ಧರಿಸಿ ಕರಾಳ ಮೌನ ಪ್ರತಿಭಟನೆ ನಡೆಸಿದರು. ಆಲಗೂಡು ಶಿವಕುಮಾರ್, ಮನ್ನೇಹುಂಡಿ ಮಹೇಶ್, ಕೆ.ಮಹದೇವ, ಎಂ.ರಮೇಶ್, ಸಿ.ಪ್ರಕಾಶ್, ಮಸ್ರೂರ್ ಅಹಮ್ಮದ್, ಡಿ.ಆರ್. ಮೂರ್ತಿ, ಬಸವರಾಜು, ಯಾಚೇನಹಳ್ಳಿ ಸೋಮಶೇಖರ್ ಇದ್ದರು.
Published on

ತಿ.ನರಸೀಪುರ: ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ನಾಯಕತ್ವವನ್ನು ದಮನ ಮಾಡಲು ಷಡ್ಯಂತ್ರ ರೂಪಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಶನಿವಾರ ಕಪ್ಪುಪಟ್ಟಿ ಧರಿಸಿ ಕರಾಳ ಮೌನ ಪ್ರತಿಭಟನೆ ನಡೆಸಿದರು.


ತಾಲೂಕು ಆಡಳಿತ ಸೌಧದ ಉದ್ಯಾನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು ತೋಳು ಮತ್ತು ಕುತ್ತಿಗೆಗೆ ಕಪ್ಪುಪಟ್ಟಿಯನ್ನು ಧರಿಸಿ ಧರಣಿ ನಡೆಸಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಯಾವುದೇ ಭ್ರಷ್ಟಾಚಾರ ನಡೆಸದ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಆದೇಶಿಸಿ, ಎಫ್‌ಐಆರ್ ದಾಖಲಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.


ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರದ ಸ್ವಾಯತ್ತ ಸಂಸ್ಥೆಗಳು ರಾಜಕೀಯ ದುರುದ್ದೇಶಗಳಿಗೆ ದುರ್ಬಳಕೆಯಾಗುತ್ತಿವೆ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಆಡಳಿತವನ್ನು ಅಸ್ಥಿರಗೊಳಿಸಬೇಕು. ಬಿಜೆಪಿ ವಿರುದ್ಧ ಪ್ರಬಲವಾಗಿ ಬೆಳೆಯುವ ನಾಯಕರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬೇಕು ಎಂಬುದೇ ಬಿಜೆಪಿ ಅಜೆಂಡಾವಾಗಿದೆ ಎಂದು ಆರೋಪಿಸಿದರು.


ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡುವ ದೊಡ್ಡ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗದ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ಭ್ರಷ್ಟಾಚಾರದ ಹಣದ ಮೂಲಕ ಅಧಿಕಾರಕ್ಕೆ ಬಂದು, ಶೇ.40 ರಷ್ಟು ಕಮೀಷನ್ ದಂಧೆ ನಡೆಸಿದರೂ ಯಾವುದೇ ತನಿಖೆಯಾಗಲಿ, ಹಗರಣದ ಪ್ರಕರಣವಾಗಲಿ ಆಗಲಿಲ್ಲ. ಬಿಜೆಪಿಯಲ್ಲಿರುವ ಹಲವು ನಾಯಕರು ಭ್ರಷ್ಟರಾಗಿದ್ದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನೇ ಮಾಡಿಲ್ಲವೆಂದು ದೂರಿದರು.


ಜಿ.ಪಂ. ಮಾಜಿ ಸದಸ್ಯ ಕೆ.ಮಹದೇವ ಮಾತನಾಡಿ, ಅಸಮಾನತೆ ಮತ್ತು ಅಸ್ಥಿರತೆಯನ್ನೇ ರಾಜಕಾರಣ ಮಾಡಿಕೊಂಡಿರುವ ಬಿಜೆಪಿಗೆ ಸಾಮಾಜಿಕ ಸಮಾನತೆಯಾಗಲಿ ಮತ್ತು ಪ್ರಬುದ್ಧ ಭಾರತದ ಭ್ರಾತೃತ್ವವಾಗಲಿ ಬೇಕಿಲ್ಲ. ಹಾಗಾಗಿ ಸಂವಿಧಾನಕ್ಕೆ ವಿಧೇಯರಾಗಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕು. ಅಧಿಕಾರ ಮತ್ತು ಸಂಪತ್ತು ಹಂಚಿಕೆಯಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ಹಕ್ಕನ್ನು ನೀಡಬೇಕೆಂಬ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಿಯಂತ್ರಿಸುವ ಮನುವಾದಿಗಳಿಗೆ ಸಮಸ್ಯೆಯಾಗಿರುವುದರಿಂದ ಮುಡಾ ನಿವೇಶನ ಹಂಚಿಕೆಯಲ್ಲಿ ಅಧಿಕಾರವನ್ನೇ ಬಳಸದಿರುವ ಮುಖ್ಯಮಂತ್ರಿ ಅವರನ್ನು ಆರೋಪಿಯನ್ನಾಗಿಸುವ ಕುತಂತ್ರವನ್ನು ಮಾಡಿದ್ದಾರೆ. ಇಂಥ ವಾಮಮಾರ್ಗದ ರಾಜಕಾರಣ ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲವೆಂದು ಕಿಡಿಕಾರಿದರು.


ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ತಾ.ಪಂ.ಮಾಜಿ ಸದಸ್ಯ ಎಂ.ರಮೇಶ್, ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಪುರಸಭೆ ಸದಸ್ಯ ತುಂಬಲ ಸಿ.ಪ್ರಕಾಶ್ ಹಾಗೂ ಮುಸ್ಲಿಂ ಮುಖಂಡ ಮಸ್ರೂರ್ ಅಹಮ್ಮದ್ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.


ಪುರಸಭಾ ಸದಸ್ಯ ಎನ್.ಸೋಮಣ್ಣ, ಮಾಜಿ ಸದಸ್ಯ ರಾಘವೇಂದ್ರ, ಗ್ರಾಪಂ ಅಧ್ಯಕ್ಷ ರಾಮನಂಜಯ್ಯ, ಸದಸ್ಯ ನಾಗರಾಜು, ಮಾಜಿ ಉಪ ಪ್ರಧಾನ ಡಿ.ಆರ್.ಮೂರ್ತಿ, ದಸಂಸ ಸಂಘಟನಾ ಸಂಚಾಲಕರಾದ ಕಿರಗಸೂರು ರಜನಿ, ಹಿರಿಯೂರು ಸೋಮಣ್ಣ, ಸಚಿವರ ಆಪ್ತ ಸಹಾಯಕ ಬಸವರಾಜು, ಮುಖಂಡರಾದ ಏಳುಮಲೈ ಮಂಜು, ಉಕ್ಕಲಗೆರೆ ರಾಜು, ಇಂಡವಾಳು ಹೊನ್ನಯ್ಯ, ಕೃಷ್ಣ ಮಾವಿನಹಳ್ಳಿ ಲಿಂಗರಾಜು, ಯಡದೊರೆ ನಾರಾಯಣ್, ರಂಗಸಮುದ್ರ ನಂಜುಂಡ, ಹುನಗನಹಳ್ಳಿ ಮಹದೇವ್, ಬಿಲಿಗೆರೆಹುಂಡಿ ಸಿದ್ದರಾಜು, ಬಿ.ಎಂ.ಶಿವಕುಮಾರ್, ಮಹೇಶ, ಆಲಗೂಡು ನಾಗರಾಜ್ ಮೂರ್ತಿ, ತಲಕಾಡು ಆನಂದ್, ಯಡದೊರೆ ನಾರಾಯಣ್, ಮುತ್ತತ್ತಿ ನಾಗರಾಜ್, ಯಾಚೇನಹಳ್ಳಿ ಶಿವರಾಂ, ಉಮೇಶ್, ಮಾದಿಗಳ್ಳಿ ರಾಮು, ಬನ್ನಹಳ್ಳಿ ರಾಜೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net