

ಹೊಸಕೋಟೆ: ನೂರಾರು ಎಕರೆ ಕಷಿ ಪ್ರದೇಶಕ್ಕೆ ನೀರುಣಿಸುತಿದ್ದ ಹೊಸಕೋಟೆ ದೊಡ್ಡ ಅಮನಾನಿ ಕೆರೆ ಇಂದು ಅಳಿವಿನಂಚು ತಲುಪಿದೆ.
ಹೆಜ್ಜಾರ್ಲೆ, ವಿವಿಧ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಈ ಕೆರೆಗೆ ವಲಸೆ ಬರುತ್ತಿದ್ದವು. ಮಾಲಿನ್ಯದಿಂದ ಈಗ ಪಕ್ಷಿಗಳು ವಲಸೆ ಬರುತ್ತಿಲ್ಲ. ಇದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಎದುರಾಗಿ, ದೊಡ್ಡ ಅಮಾನಿ ಕೆರೆ ಉಳಿಸಿ ಎಂದು ಪರಿಸರ ಪ್ರೇಮಿಗಳು ಭಾನುವಾರ ಭಿತ್ತಿ ಪತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಕೆರೆಗೆ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ಅಲ್ಲದೆ ವಿವಿಧ ಕಾರ್ಖಾನೆ ಹಾಗೂ ಅಪಾರ್ಟ್‌ಮೆಂಟ್ ತ್ಯಾಜ್ಯ ಸೇರುತ್ತಿರುವುದರಿಂದ ನೀರು ಮಲಿನಗೊಂಡಿದೆ. ಕೆರೆ ಏರಿ ಮೇಲೆ ಮದ್ಯಪಾನ, ಅನೈತಿಕ ಚಟುವಟಿಕೆ ನಡೆಯುತ್ತಿದೆ. ಅಲ್ಲದೆ ಕೆರೆ ಒತ್ತುವರಿಯಾಗಿರುವುದರಿಂದ ಕೆರೆ ಕುರುಹು ಕಳೆದುಕೊಳ್ಳುತ್ತಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದರು.
ಕೆರೆ ಆವರಣದಲ್ಲಿ ಬೆಂಗಳೂರು ನಗರದ ಕಸವನ್ನು ಸುರಿಯಲಾಗುತ್ತಿದೆ. ಬೆಂಗಳೂರಿನ ಕಸ ಸುರಿಯದಂತೆ ವಾಯು ವಿಹಾರಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಗಮನ ಹರಿಸುತ್ತಿಲ್ಲ ಎಂದು ವಾಯುವಿಹಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಿ ವೀಕ್ಷಕರ ನೆಚ್ಚಿನ ತಾಣ: ದೊಡ್ಡ ಅಮಾನಿಕೆರೆ ಪಕ್ಷಿ ವೀಕ್ಷಕರ ತಾಣವಾಗಿತ್ತು. ಬೆಂಗಳೂರಿಗೆ ಸನಿಹದಲ್ಲಿರುವುದರಿಂದ ವಾರಾಂತ್ಯದಲ್ಲಿ ಪಕ್ಷಿ ವೀಕ್ಷಕರು ಹಾಗೂ ಛಾಯಾ ಗ್ರಾಹಕರು ಆಗಮಿಸುತ್ತಿದ್ದರು. ಕೆರೆ ಸಂತಾನೋತ್ಪತ್ತಿಗೆ ಹೆಜ್ಜಾರ್ಲೆ ಸೇರಿ 200ಕ್ಕೂ ಅಧಿಕ ಪಕ್ಷಿಗಳು ವಲಸೆ ಬರುತ್ತಿದ್ದವು. ಮಾಲಿನ್ಯದಿಂದ ಈಗ ಪಕ್ಷಿಗಳ ವಲಸೆ ಕಡಿಮೆಯಾಗಿದೆ. ಕಳೆದ ವರ್ಷ ಕೆರೆ ವಂಶವೃದ್ಧಿಗೆ ರಾಜಹಂಸ ವಲಸೆ ಬಂದಿತ್ತು. ಇದನ್ನು ವೀಕ್ಷಿಸಲು ಹಲವು ಮಂದಿ ಭೇಟಿ ಕೊಟ್ಟಿದ್ದರು. ಸ್ಥಳೀಯ ಆಡಳಿತ ಗಮನ ಹರಿಸಿದರೆ ಉತ್ತಮ ಪ್ರವಾಸಿ ತಾಣ ಮಾಡಬಹುದು ಎಂಬುದು ಪರಿಸರ ಪ್ರೇಮಿಗಳ ಆಗ್ರಹ.
ಕೆರೆ ಉಳಿಸಲು ಹೋರಾಟ: ಪಕ್ಷಿ ಪ್ರಿಯರು ಹಾಗೂ ಪರಿಸರ ಪ್ರೇಮಿಗಳು ದೊಡ್ಡ ಅಮಾನಿಕೆರೆ ಉಳಿಸಲು ಹೋರಾಟ ನಡೆಸುತ್ತಿದ್ದಾರೆ. ಕೆಲವು ಪರಿಸರ ಪ್ರೇಮಿಗಳು ಕೆರೆ ಏರಿ ಮೇಲೆ ಗಿಡ ನೆಟ್ಟು ಪೋಷಣೆ ಮಾಡುತ್ತಿದ್ದರೆ, ಮತ್ತೆ ಕೆಲವರು ಕೆರೆ ಆವರಣದಲ್ಲಿರುವ ತ್ಯಾಜ್ಯ ಸ್ವಚ್ಛತೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಕೂಡ ಕೆರೆ ಏರಿ ಮೇಲೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸುತ್ತಿದೆ. ಅರಣ್ಯ ಇಲಾಖೆ ಹಾಗೂ ಪರಿಸರ ಪ್ರೇಮಿಗಳು ಕೆರೆ ರಕ್ಷಣೆಗೆ ಮುಂದಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ ಸ್ಥಳೀಯರು.