

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26ಕ್ಕೂ ಹೆಚ್ಚು ಪ್ರವಾಸಿಗರ ಸಾವಿಗೆ ಕಾರಣವಾದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು. ಆ ಮೂಲಕ ಭಾರತದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅಧ್ಯಕ್ಷತೆಯಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಸಂಸ್ಥೆಯ ಪದಾಽಕಾರಿಗಳು, ಸದಸ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ದಿನ ಆಚರಿಸಿ ಉಗ್ರರನ್ನು ಸೆದೆಬಡಿಯುವಂತೆ ಆಗ್ರಹಿಸಿದರು.
ಶಾಂತಿಪ್ರಿಯ ರಾಷ್ಟ್ರದಲ್ಲಿ ಸರ್ವಧರ್ಮೀಯರಿಗೂ ಸೂಕ್ತ ರಕ್ಷಣೆ ಒದಗಿಸುವುದು ಅತ್ಯವಶ್ಯ. ಇಂತಹ ಕೃತ್ಯಗಳಿಂದ ದೇಶದಲ್ಲಿ ಅಶಾಂತಿ, ಗಲಭೆ, ಗುಂಪುಗಾರಿಕೆ, ಕೋಮುವಾದಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಆದ್ದರಿಂದ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕೃತ್ಯವೆಸಗಿದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬಶೀರಅಹ್ಮದ್ ಜಹಗೀರದಾರ, ಎಸ್.ಎ. ಸರಗಿರೊ, ಮೊಹ್ಮದ್‌ಶಫಿ ಕಳ್ಳಿಮನಿ, ಮೊಹ್ಮದ್‌ರಫೀಕ್ ಶಿರಹಟ್ಟಿ, ಮೌಲಾನಾ ಮೊಹ್ಮದ್ ಯುಸುಫ್ ಧರ್ಮಾಯತ್, ಮೊಹ್ಮದ್ ಮಕಾನದಾರ, ಇತರರು ಪಾಲ್ಗೊಂಡಿದ್ದರು.