ವಕ್ಪ್ ತಿದ್ದುಪಡಿ ಹಿಂಪಡೆಯಲು ಒತ್ತಾಯಿಸಿ ಮೌನ ಪ್ರತಿಭಟನೆ

AKR PROTEST
Published on

ಅಕ್ಕಿಆಲೂರ: ಕೇಂದ್ರ ಸರ್ಕಾರ ಪಾಸ್ ಮಾಡಿರುವ ವಕ್ಪ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ಮುಸ್ಲಿಮರು ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಅಂಜುಮನ್ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಜಮಾಯಿಸಿದ್ದ ನೂರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ, ವಕ್ಪ್ ಕಾಯ್ದೆಯ ತಿದ್ದುಪಡಿಗಳು ಮುಸ್ಲಿಂ ಸಮುದಾಯದ ಸ್ವಾಯತ್ತತೆ ಧಕ್ಕೆ ತರುವಂತಿದೆ. ವಕ್ಪ್ ಮಂಡಳಿಗಳ ಹಾಗೂ ಸಂಸ್ಥೆಗಳ ಅಧಿಕಾರ ದುರ್ಬಲಗೊಳಿಸುತ್ತದೆ. ಇದರಿಂದಾಗಿ ವಕ್ಪ್ ಆಸ್ತಿಗಳ ಕಬಳಿಕೆ ಮತ್ತು ದುರ್ಬಳಕೆಗೆ ಅವಕಾಶ ಹೆಚ್ಚುತ್ತದೆ. ಈ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವು ಕೊಂಚ ನೆಮ್ಮದಿಗೆ ಕಾರಣವಾಗಿದೆ. ಮುಸ್ಲಿಂ ಸಮುದಾಯದೊಂದಿಗೆ ಸಮರ್ಪಕ ಸಮಾಲೋಚನೆ ಹಾಗೂ ಚರ್ಚೆ ಇಲ್ಲದೇ ತರಾತುರಿಯಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆ ಪಾಸ್ ಮಾಡಿದೆ. ಇದರಿಂದ ಮುಸ್ಲಿಂ ಸಮುದಾಯ ಈ ಕಾಯ್ದೆ ಒಪ್ಪಲು ಸಾಧ್ಯವಿಲ್ಲ. ವಿವಾದಿತ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಂಜುಮನ್ ಎ-ಇಸ್ಲಾಂ ಸುನ್ನಿ ಹನಫಿ ಅಧ್ಯಕ್ಷ ಮೆಹಬೂಬ ಅಲಿ ಬ್ಯಾಡಗಿ, ಉಪಾಧ್ಯಕ್ಷ ರಿಯಾಜ್ ಹಾವಣಗಿ, ಜಮಿಯತ್ ಅಹಲೆ ಹದೀಸ ಸಂಘದ ಅಧ್ಯಕ್ಷ ಫಯಾಜ್ ಅಹ್ಮದ್ ಲಾಲಾನವರ, ಉಪಾಧ್ಯಕ್ಷ ಸತ್ತಾರಸಾಬ್ ಅರಳೇಶ್ವರ, ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು, ಮುಸ್ಲಿಂ ಧರ್ಮಗುರುಗಳು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net