

ಹುಬ್ಬಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಸಲಾಗುತ್ತಿರುವ ಷಡ್ಯಂತ್ರ ಹಾಗೂ ಅಪಪ್ರಚಾರಗಳನ್ನು ವಿರೋಧಿಸಿ ಹುಬ್ಬಳ್ಳಿ ದಿಗಂಬರ ಜೈನ ಸಮಾಜದವರು ನಗರದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ಮೂರುಸಾವಿರ ಮಠದ ಬಳಿಯ ಶಾಂತಿನಾಥ ಸಾಂಸ್ಕೃತಿಕ ಭವನದಿಂದ ತಹಸೀಲ್ದಾರ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿದ ಸಮಾಜದ ನೂರಾರು ಶ್ರಾವಕ- ಶ್ರಾವಕಿಯರು, ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ಸುಳ್ಳು ಪ್ರಚಾರ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬಿಳಗಿ, ವಿಮಲ ತಾಳಿಕೋಟಿ, ಆರ್.ಟಿ. ತವನಪ್ಪನವರ, ಶಾಂತಿನಾಥ ಹೋತಪೇಟಿ ಹಾಗೂ ವಸಂತ ಜೈನ್, ಕಳೆದ 800 ವರ್ಷಗಳಿಂದ ಲಕ್ಷಾಂತರ ಜನರ ಶ್ರದ್ದೆಯ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ಸರ್ವಧರ್ವಿುಯರ ಮನ ಗೆದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಕ್ಷೇತ್ರದ ಮತ್ತು ಹೆಗ್ಗಡೆಯವರ ವರ್ಚಸ್ಸಿಗೆ ಕುಂದು ತರುತ್ತಿರುವ ದುಷ್ಕರ್ವಿುಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸುಹಾಸ ಜವಳಿ, ಶ್ರೇಣಿಕರಾಜ ರಾಜಮಾನೆ , ವಿನಯ ಜವಳಿ, ಸಂತೋಷ ಮುರಗಿ ಪಾಟೀಲ, ಮನ್ಮಥ ಕ್ಯಾಸಾ, ರಾಜೇಂದ್ರ ದಿನಕರ, ಅಭಿನಂದನ ಒನಕುದುರೆ, ಅಜಯ ಬಿಳಗಿ, ಮದನ ಕುಮಾರ ದಂಡಾವತಿ, ಶಶಿಧರ ಬಳಗೇರ. ಧರಣೇಂದ್ರ ಜವಳಿ, ಅಜಿತ ಸಿರುಗುಪ್ಪಿ, ಸುಜಾತ ಗುಗ್ಗರಿ, ಪದ್ಮಶ್ರೀ ಹದಳಗಿ, ಚಂದನ ಜವಳಿ, ರತ್ನ ಉಪಾಧ್ಯ, ಚಂದನ ಬಿಳಗಿ, ಭಾರತಿ ಹಿರೇಗೌಡರ, ತವನಪ್ಪ ಶಿರಗುಪ್ಪಿ, ಧರಣೇಂದ್ರ ಇಜಾರಿ, ಶಾಂತರಾಜ ಹದಳಗಿ, ಪ್ರಶಾಂತ ಶೆಟ್ಟಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.