ಆಡಳಿತ ವಿರುದ್ಧ ಯುವ ಸಂಚಲನ ತಂಡ ಮೌನ ಪ್ರತಿಭಟನೆ

protest
ಮೌನ ಪ್ರತಿಭಟನೆ
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಕೊಡಿಗೇಹಳ್ಳಿ ಸಮೀಪದ ಅರಳು ಮಲ್ಲಿಗೆ ಕೆರೆಯ ಪ್ರಮುಖ ರಾಜಕಾಲುವೆ ಬಳಿ ಕೈಗಾರಿಕಾ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಯುವ ಸಂಚಲನದ ನೇತೃತ್ವದಲ್ಲಿ ಗ್ರಾಮಸ್ಥರು ಮೌನ ಪ್ರತಿಭಟನೆ ನಡೆಸಿದರು.
ಯುವ ಸಂಚಲನ ಅಧ್ಯಕ್ಷ ಚಿದಾನಂದ ಮಾತನಾಡಿ, ಐದು ಹಂತಗಳಲ್ಲಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ವಿಸ್ತಾರವಾಗಿ ಬೆಳೆದಿದೆ. ಆದರೆ, ಇಡೀ ಕೈಗಾರಿಕಾ ವಲಯದಲ್ಲಿ ಒಂದೇ ಒಂದು ಸುಸಜ್ಜಿತ ಕೈಗಾರಿಕಾ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿಲ್ಲ ಎಂದು ದೂರಿದರು.
ಕೈಗಾರಿಕೆಗಳಲ್ಲಿನ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ದಶಕಗಳಿಂದಲೂ ಸಂಸ್ಕರಿಸದೇ ಅರ್ಕಾವತಿ ನದಿ ಪಾತ್ರದ ಮಜರಾಹೊಸಹಳ್ಳಿ, ದೊಡ್ಡತುಮಕೂರು ಕೆರೆಗಳಿಗೆ ಹರಿದು ಬಿಡಲಾಗಿದೆ. ಇದರಿಂದಾಗಿ ಆ ಭಾಗದ ಗ್ರಾಮಗಳ ಅಂತರ್ಜಲ ಕಲುಷಿತವಾಗಿದ್ದು, ಕುಡಿಯುವ ನೀರನ್ನು ದೂರದ ಊರುಗಳಿಂದ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಅಲ್ಲಿನ ಜನರ ತೀವ್ರ ಪ್ರತಿಭಟನೆ ನಂತರ ಈಗ ಕೈಗಾರಿಕೆಗಳವರು ತ್ಯಾಜ್ಯ ನೀರನ್ನು ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ತಂದು, ಹೆದ್ದಾರಿ ಬದಿಯಲ್ಲಿನ ಬೃಹತ್ ರಾಜಕಾಲುವೆಗಳಿಗೆ ಸುರಿದು ಹೋಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೀರನ್ನು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳಿಗಳಿಗೆ ಮನವಿ ಸಲ್ಲಿಸಿ ತಿಂಗಳು ಕಳೆದಿದೆ. ಸತತ ಒತ್ತಾಯದ ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ರಾಜಕಾಲುವೆಯಲ್ಲಿನ ಕಲುಷಿತ ತ್ಯಾಜ್ಯ ನೀರನ್ನು ಬಾಟಲಿಗಳಲ್ಲಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವಿನಃ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net