ಜಮಖಂಡಿಯಲ್ಲಿ ಮೌನ ಮೆರವಣಿಗೆ

Silent march in Jamkhandi
ಜಮಖಂಡಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕಿನ ಮಠಾಧೀಶರು, ಗಣ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.
Published on

ಜಮಖಂಡಿ: ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿದ ಅಪರಾಧಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಮಠಾಧೀಶರ ಒಕ್ಕೂಟ ಹಾಗೂ ಜಮಖಂಡಿ ತಾಲೂಕಿನ ವಿವಿಧ ಮಠಾಧೀಶರು, ಜೈನ ಸಮಾಜದ ಮುಖಂಡರು ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ನಗರದ ದೇಸಾಯಿ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಪಂಚಮಸಾಲಿ ಮೂರನೇ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯರು ಮಾತನಾಡಿ, ಜೈನಮುನಿ ಕಾಮಕುಮಾರ ನಂದಿ ಶ್ರೀಗಳನ್ನು ಬರ್ಬರ ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ವಿವಿಧ ಮಠಾಧೀಶರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಶ್ರೀಗಳು ಮತ್ತು ಮುನಿಗಳಿಗೆ ಬಹಳ ಗೌರವ ನೀಡುವ ದೇಶ ಭಾರತವಾಗಿದೆ. ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ಕಾಮಕುಮಾರ ನಂದಿ ಜೈನ ಮುನಿಗಳ ಹತ್ಯೆ ಮಾಡಿರುವುದನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಸರ್ಕಾರ ಕ್ರಮ ವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಆಲಗೂರ ಧರಿದೇವರಮಠದ ಲಕ್ಷ್ಮಣ ಮುತ್ಯಾ, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕುಂಚನೂರ ಕಮರಿಮಠದ ಸಿದ್ಧಲಿಂಗದೇವರು, ಸದಾಶಿವ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಪುತ್ರ ಅವಧೂತ ಸ್ವಾಮೀಜಿ, ಸುಶೀಲಕುಮಾರ ಬೆಳಗಲಿ, ವರ್ಧಮಾನ ನ್ಯಾಮಗೌಡ, ಅರುಣಕುಮಾರ ಶಹಾ, ದೇವಲ ದೇಸಾಯಿ, ಅಣ್ಣಪ್ಪ ಶಿರಹಟ್ಟಿ, ಅಣ್ಣಪ್ಪ ನಂದಗಾಂವ, ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದರಡ್ಡಿ, ಆರ್.ಪಿ. ನ್ಯಾಮಗೌಡ, ಅಭಯಕುಮಾರ ನಾಂದ್ರೇಕರ, ಪ್ರದೀಪ ಮೆಟಗುಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net