

ಬಾಳೆಹೊನ್ನೂರು: ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಕೆಟ್ಟವರಿಗೆ ಇರುವಷ್ಟು ಮಿತ್ರರು ಒಳ್ಳೆಯವರಿಗೆ ಇರುವುದಿಲ್ಲ. ತುಳಿಯೋಕೆ ವೈರಿಗಳಿದ್ದರೆ ಬೆಳೆಸುವುದಕ್ಕೆ ಭಗವಂತ ಇದ್ದೇ ಇರುತ್ತಾನೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಹಸಿದಾಗ ಅನ್ನ ಕೊಟ್ಟವರನ್ನು ಸೋತಾಗ ನಮ್ಮ ಜತೆಗೆ ನಿಂತವರನ್ನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರನ್ನು ಮರೆಯಬಾರದು. ಆಸೆಯನ್ನು ಬಿಟ್ಟು ಲೋಕವಿಲ್ಲ. ಆಸೆಯೆಂಬ ಸುಮಗಳ ಸುತ್ತ ಮನವೆಂಬ ಭ್ರಮರಗಳು ಸುತ್ತುತ್ತಲೇ ಇರುತ್ತವೆ. ಮೌನ ಮತ್ತು ಮುಗುಳ್ನಗೆ ಎರಡು ಶಕ್ತಿಶಾಲಿ ಸಾಧನಗಳು. ನಗು ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿದರೆ ಮೌನ ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ ಎಂದರು.
ಹಸಿದು ಬಂದ ಜೀವಕ್ಕೆ ಒಂದು ತುತ್ತು ಅನ್ನ ಕೊಟ್ಟರೆ ಅದೇ ದೇವರಿಗೆ ಪ್ರಸಾದ. ದುಡ್ಡುಕೊಟ್ಟು ಎಲ್ಲಿ ಬೇಕಾದರೂ ಜಾಗ ಖರೀದಿಸಬಹುದು. ಆದರೆ ಸ್ಮಶಾನದಲ್ಲಿ ಜೀವ ಕೊಟ್ಟೇ ಜಾಗ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಕಟು ಸತ್ಯವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮೌಲ್ಯಾಧಾರಿತ ಜೀವನ ಸಂವರ್ಧನೆಗೆ ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತುಂಬಿವೆ ಎಂದರು.
ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ಬೆಂಗಳೂರಿನ ಬೀರೂರು ಶಿವಸ್ವಾಮಿ, ನಂದೀಶ ದಾಸರಹಳ್ಳಿ, ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ, ಹರಪನಹಳ್ಳಿ ಎಂ.ಕೊಟ್ರೇಶಪ್ಪ, ಬ್ಯಾಡಗಿ ರವೀಂದ್ರ, ಮಂಜುನಾಥ ಶಾಸ್ತ್ರಿ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ, ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.