ಆಲಮಟ್ಟಿ ಅಣೆಕಟ್ಟೆ ಒಳಹರಿವಿನಲ್ಲಿ ಗಣನೀಯ ಏರಿಕೆ

Significant increase in inflow to Almatti Dam
ಆಲಮಟ್ಟಿ ಲಾಲ್​ ಬಹಾದೂರ್​ ಶಾಸ್ತ್ರಿ ಸಾಗರ ಹಿನ್ನೀರಿನ ನೋಟ
Published on

ಆಲಮಟ್ಟಿ: ಮಹಾರಾಷ್ಟ್ರದ ಪಶ್ಚಿಮ ಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಲಾಲ್​ ಬಹಾದೂರ್​ ಶಾಸ್ತ್ರಿ ಸಾಗರಕ್ಕೆ ದಿನದಿಂದ ದಿನಕ್ಕೆ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗುತ್ತಿದೆ.

ಕೃಷ್ಣೆಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ಸಾತಾರಾ, ಸಾಂಗ್ಲಿ, ಕೊಲ್ಹಾಪುರ, ರತ್ನಾಗಿರಿ ಜಿಲ್ಲೆಗಳಲ್ಲಿ ಹಾಗೂ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ರಾಜ್ಯದ ಟಪ್ರಭ ನದಿ ಸೇರಿ ಕೃಷ್ಣಾ ನದಿಯ ಎಲ್ಲ ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿದು ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ.

ಗರಿಷ್ಠ 519.60 ಮೀಟರ್​ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ ಸಂಜೆ 515.10 ಮೀಟರ್​ ಎತ್ತರದಲ್ಲಿ 64.031 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವಿನ ಪ್ರಮಾಣ 23,230 ಕ್ಯೂಸೆಕ್​ ಇದ್ದರೆ 15ಸಾವಿರ ಕ್ಯುಸೆಕ್​ ನೀರನ್ನು ಕೆಪಿಸಿಎಲ್​ ಮೂಲಕ ನದಿ ಪಾತ್ರಕ್ಕೆ ಹರಿಸಲಾಗುತ್ತಿತ್ತು.

ಕಳೆದ ವರ್ಷ ಇದೇ ದಿನದಂದು 509.22 ಮೀಟರ್​ ಎತ್ತರದಲ್ಲಿ 26.312 ಟಿಎಂಸಿ, 23,230 ಕ್ಯೂಸೆಕ್​ ಒಳಹರಿವು, 430 ಕ್ಯೂಸೆಕ್​ ನೀರಿನ ಹೊರಹರಿವು ಇತ್ತು.

ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್​ ಉತ್ಪಾದನಾ ಕೇಂದ್ರದ ಮೂಲಕ 15 ಸಾವಿರ ಕ್ಯೂಸೆಕ್​ ನೀರನ್ನು ಬಿಡುತ್ತಿರುವುದರಿಂದ ಅಲ್ಲಿನ ಎರಡು ಟಕಗಳಿಂದ 80 ಮೆಗಾ ವಾಟ್​ ವಿದ್ಯುತ್​ ಉತ್ಪಾದಿಸಲಾಗುತ್ತಿದೆ. ಗರಿಷ್ಠ ವಿದ್ಯುತ್​ ಉತ್ಪಾದನಾ ಸಾಮರ್ಥ್ಯ 290 ಮೆಗಾವಾಟ್​ ಇದೆ.

ಭಾನುವಾರ ಮಧ್ಯಾಹ್ನದವರೆಗೆ ಜಲಾಶಯದಿಂದ 10 ಸಾವಿರ ಕ್ಯೂಸೆಕ್​ ನೀರನ್ನು ಬಿಡಲಾಗಿದ್ದು, ಸಂಜೆ 15 ಸಾವಿರ ಕ್ಯೂಸೆಕ್​ಗೆ ಏರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಂಭವವಿದೆ ಎಂದು ಜಲಾಶಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net