ಜಿಲ್ಲಾಡಳಿತ ಭವನಕ್ಕೆ ಮಹನೀಯರ ಮೆರುಗು, ಭವ್ಯ ಕಟ್ಟಡಕ್ಕೆ ಪ್ರತಿಮೆಗಳೇ ಕಳಸ, ಜನರ ಕೂಗಿಗೆ ಜಿಲ್ಲಾಡಳಿತ ಸ್ಪಂದನೆ

fec419d4-8bf2-4152-b0a8-3b14480a2916
Published on

ಶಿವರಾಜ ಎಂ. ಬೆಂಗಳೂರು

ಬೆಂ.ಗ್ರಾಮಾಂತರ ಜಿಲ್ಲಾಡಳಿತ ಭವನ ಆವರಣದಲ್ಲಿ ನಾಡಿನ ಮಹನೀಯರ ಪ್ರತಿಮೆಗಳು ಮೈದಳೆಯಲಿವೆ. ಪ್ರತಿಮೆಗಳ ನಿರ್ಮಾಣ ಕೂಗಿಗೆ ಜಿಲ್ಲಾಡಳಿತ ಕಿವಿಯಾಗಿದ್ದು, ನಾಡಪ್ರಭು ಕೆಂಪೇಗೌಡ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಇದರ ಸಾಲಿಗೆ ಜ್ಞಾನಜ್ಯೋತಿ ಬಸವಣ್ಣನವರ ಪ್ರತಿಮೆಯೂ ಸೇರ್ಪಡೆಯಾಗಿದ್ದು, ಭೂಮಿಪೂಜೆ ನೆರವೇರಿದೆ. ಕೆಲವೇ ತಿಂಗಳಲ್ಲಿ ಭವನದ ಮೆರುಗು ಮತ್ತಷ್ಟು ಹೆಚ್ಚಲಿದೆ. ಮೂರು ಮಹನೀಯರ ಪ್ರತಿಮೆ ನಿರ್ಮಾಣದ ಜತೆಗೆ ಮತ್ತಷ್ಟು ಮಹನೀಯರ ಪ್ರತಿಮೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಒತ್ತಡ ಬರುತ್ತಿದೆ. ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ಎಷ್ಟಕ್ಕೆ ಅನುಮೋದನೆ ದೊರೆಯುತ್ತದೆ ಎಂಬುದರ ಮೇಲೆ ಪ್ರತಿಮೆಗಳ ಸಾಲು ಕಂಡುಬರಲಿದೆ.

ಲಕ್ಷಾಂತರ ರೂ.ವೆಚ್ಚ: ನುರಿತ ಶಿಲ್ಪಿಗಳಿಂದ ಪ್ರತಿಮೆ ಕೆತ್ತನೆ ನಡೆಯಲಿದೆ. ಪ್ರತಿ ಪ್ರತಿಮೆಗೂ ತಳಭಾಗದ ಪೀಠ ಸೇರಿ ಕಮಾನು ಮತ್ತಿತರ ಕಾಮಗಾರಿಗೆ ಅನುದಾನ ನೀಡಲಾಗುತ್ತಿದೆ. ಬಸವಣ್ಣ ಪ್ರತಿಮೆಗೆ 30ರಿಂದ 50 ಲಕ್ಷ ರೂ.ಅಂದಾಜು ವೆಚ್ಚವಾಗಲಿದೆ. ಕೆಂಪೇಗೌಡ ಪ್ರತಿಮೆಗೆ 75 ಲಕ್ಷ ರೂ. ಅಂದಾಜಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ 60 ಲಕ್ಷ ರೂ.ವೆಚ್ಚದಲ್ಲಿ ಮೈದಳೆಯಲಿದೆ.

ರಸ್ತೆ ವಿಸ್ತರಣೆ ಆತಂಕ: ಜಿಲ್ಲಾಡಳಿತ ಭವನಕ್ಕೆ ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ದಾರಿ 207ರ ವಿಸ್ತರಣೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಜಿಲ್ಲಾಡಳಿತದ ಮುಂಭಾಗದ ತಡೆಗೋಡೆ ತೆರವುಗೊಳಿಸುವ ಅನಿವಾರ್ಯತೆ ಇದೆ. ಇದರಿಂದ ಪ್ರತಿಮೆಗಳಿಗೂ ತೊಂದರೆಯಾಗಬಹುದು ಎಂಬ ಆತಂಕ ಎದುರಾಗಿದೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಸ್ತಾವನೆ: ಇತ್ತೀಚೆಗೆ ನಡೆದ ಜಿಪಂ ಸರ್ವ ಸದಸ್ಯರ ಸಭೆಯಲ್ಲೂ ಮತ್ತಷ್ಟು ಮಹನೀಯರ ಪ್ರತಿಮೆ ಸ್ಥಾಪನೆ ಬಗ್ಗೆ ಪ್ರಸ್ತಾಪವಾಗಿದೆ. ಇದರಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ವಿಷಯ ಮುಂಚೂಣಿಗೆ ಬಂದಿದೆ. ಗ್ರಾಪಂ ಸಭೆಯಲ್ಲಿ ಅನುಮೋದನೆಗೊಂಡು ಜಿಪಂ ಸರ್ವಸದಸ್ಯರ ಸಭೆಯಲ್ಲಿ ಚರ್ಚೆಯಾಗಿ ಒಪ್ಪಿಗೆ ಸಿಕ್ಕಿದ್ದು, ಈ ವಿಷಯ ಜಿಲ್ಲಾಧಿಕಾರಿಗಳ ಅಂಗಳದಲ್ಲಿದೆ.

ಸಂಗೊಳ್ಳಿರಾಯಣ್ಣ ಪ್ರತಿಮೆ ನಿರ್ಮಾಣದ ಬಗ್ಗೆ ಜಿಪಂ ಸಭೆಯಲ್ಲಿ ಚರ್ಚೆಯಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿಮೆಗಳ ನಿರ್ಮಾಣ, ಅನುಮತಿ ಕುರಿತು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಕೆ.ಕರಿಯಪ್ಪ, ಜಿಪಂ ಉಪಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net