ಹತ್ತಿ ಬಿತ್ತನೆ ಪ್ರಮಾಣ ಗಣನೀಯ ಇಳಿಕೆ

19 Dwd 1
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಜಿಲ್ಲೆಯಲ್ಲಿ ಹತ್ತಿ ಬೆಳೆಯ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಏಕ ಬೆಳೆ, ಕೃಷಿ ಕಾರ್ಮಿಕರ ಕೊರತೆ, ಕೀಟಬಾಧೆ, ಇಳುವರಿ ಕುಂಠಿತವಾಗುತ್ತಿರುವುದು ಗಣನೀಯ ಪ್ರಮಾಣದ ಇಳಿಕೆಗೆ ಕಾರಣ.

2020- 21ನೇ ಸಾಲಿನಲ್ಲಿ 86,592 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಪ್ರಸಕ್ತ ವರ್ಷ 52,000 ಹೆಕ್ಟೇರ್ ಬಿತ್ತನೆ ಗುರಿ ಇತ್ತಾದರೂ ಕೃಷಿ ಇಲಾಖೆಯ ಅಂಕಿಅ0ಶದ0ತೆ ಜೂ. 12ರವರೆಗೆ 9,228 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಶೇ. 30ರಷ್ಟು ಭೂಮಿ ಬಿತ್ತನೆ ಬಾಕಿ ಇದ್ದು, ಕೆಲ ದಿನಗಳಿಂದ ಮಳೆ ಬಿಡುವು ನೀಡಿದೆ. ಹೀಗಾಗಿ ಈ ಬಾರಿ ಸುಮಾರು 20,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗುವ ನಿರೀಕ್ಷೆ ಇದೆ.

ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಹತ್ತಿಯೂ ಒಂದು. ರೈತರಿಗೆ ಹತ್ತಿ ಫಸಲಿನ ಜತೆಗೆ ವರ್ಷಕ್ಕಾಗುವಷ್ಟು ಉರುವಲು ಕಟ್ಟಿಗೆಯೂ ದೊರೆಯುತ್ತಿತ್ತು. ಆದರೆ, ಕೀಟಬಾಧೆ ಮತ್ತು ಕೃಷಿ ಕಾರ್ಮಿಕರು ಸಿಗದಿರುವುದರಿಂದ ರೈತರು ಹತ್ತಿ ಬೆಳೆಯ ಬದಲು ಬೇರೆ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಹಲವು ಬೆಳೆಗಳ ಬಿತ್ತನೆ ಬೀಜ ಸಹಾಯಧನದಲ್ಲಿ ದೊರೆಯುತ್ತವೆ. ಆದರೆ, ಹತ್ತಿ ಬೀಜಕ್ಕೆ ಸಹಾಯಧನವಿಲ್ಲ. ಜತೆಗೆ ಕೀಟಬಾಧೆ ಹತ್ತಿ ಬೆಳೆಗೆ ಇನ್ನಿಲ್ಲದಂತೆ ಕಾಡುತ್ತಿದೆ. ಕೀಟಬಾಧೆ ನಿರ್ವಹಣೆಗೆ 4- 6 ಬಾರಿ ದುಬಾರಿ ಕೀಟನಾಶಕ ಸಿಂಪಡಣೆ ಮಾಡಬೇಕು. ಕೆಲ ವರ್ಷಗಳಿಂದ ಗುಲಾಬಿ ಕಾಯಿಕೊರಕದ ಹಾವಳಿ ಹೆಚ್ಚಾಗಿದೆ. ಹತ್ತಿ ಕಾಯಿ ಹಸಿರಿರುವಾಗಲೆ ನುಸುಳುವ ಈ ಕೀಟ, ಹತ್ತಿಯ ವರ್ಣವನ್ನೇ ಬದಲಿಸಿ ಇಳುವರಿಯನ್ನು ಕುಂಠಿತಗೊಳಿಸುತ್ತಿದೆ. ಈ ರೋಗ ನಿರ್ವಹಣೆ ಕೃಷಿ ಇಲಾಖೆಗೂ ತಲೆನೋವಾಗಿ ಪರಿಣಮಿಸಿದ್ದುಂಟು.

ಜೂನ್‌ನಲ್ಲಿ ಬಿತ್ತನೆಯಾಗುವ ಹತ್ತಿ ಬೆಳೆ ಅಕ್ಟೋಬರ್- ನವೆಂಬರ್‌ನಲ್ಲಿ ಕೈಗೆ ಬರುತ್ತದೆ. ಈ ಸಂದರ್ಭದಲ್ಲಿ ಅಕಾಲಿಕ ಮಳೆಯಾದರೆ ಬೆಳೆ ಸಂಪೂರ್ಣ ಹಾಳಾಗುವ ಭೀತಿ ಇರುತ್ತದೆ. ಇನ್ನು ಕೃಷಿ ಕಾರ್ಮಿಕರು ಸಿಗದಿರುವುದು ಹತ್ತಿ ಬೆಳೆ ಕ್ಷೇತ್ರ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣ. ಹತ್ತಿ ಬಿಡಿಸಲು ದಿನಕ್ಕೆ 300 ರೂಪಾಯಿ ಕೊಟ್ಟರೂ ಕಾರ್ಮಿಕರು ಹಿಂದೇಟು ಹಾಕುತ್ತಾರೆ. ಇದೂ ರೈತರ ಹಿಂದೇಟಿಗೆ ಕಾರಣ. ಕೀಟ ಮತ್ತು ರೋಗ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿರುವುದರಿಂದ ವರ್ಷದಿಂದ ವರ್ಷಕ್ಕೆ ಇಳುವರಿಯೂ ಕಡಿಮೆಯಾಗುತ್ತಿದೆ ಎಂಬುದು ಕೃಷಿ ವಿಶ್ವವಿದ್ಯಾಲಯದ ಹತ್ತಿ ಬೆಳೆ ವಿಜ್ಞಾನಿಗಳ ಅಭಿಪ್ರಾಯ.

ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಸುರಿದ ಮಳೆಯಿಂದ ಬಿತ್ತನೆಯಾಗಿದ್ದ ಭೂಮಿ ಜಲಾವೃತವಾಗಿತ್ತು. ಕೊಚ್ಚಿ ಹೋಗಿರುವ ಸೋಯಾಬಿನ್, ಹತ್ತಿ, ಹೆಸರು, ಉದ್ದು ಬೆಳೆಗಳ ಬದಲು ಹತ್ತಿ ಬಿತ್ತನೆಯಾಗುವ ಸಾಧ್ಯತೆ ಇದೆ.

5 ವರ್ಷಗಳ ಅಂಕಿಅ0ಶ ವರ್ಷ                ಬಿತ್ತನೆ ಪ್ರಮಾಣ 2020- 21       86,592 ಹೆಕ್ಟೇರ್ 2021- 22       54,570 ಹೆಕ್ಟೇರ್ 2022- 23      47,795 ಹೆಕ್ಟೇರ್ 2023- 24      25,807 ಹೆಕ್ಟೇರ್ 2024- 25      31,697 ಹೆಕ್ಟೇರ್ 2025- 26      9,228 ಹೆಕ್ಟೇರ್ (ಜೂ. 12ರವರೆಗೆ)

ಜಿಲ್ಲೆಯಲ್ಲಿ ಗುಲಾಬಿ ಕಾಯಿಕೊರಕ ರೋಗಬಾಧೆ ಹತೋಟಿಯಲ್ಲಿದೆ. ವಿದೇಶಗಳಲ್ಲಿ ಹತ್ತಿ ಬಿಡಿಸುವ ಯಂತ್ರಗಳು ಬಳಕೆಯಲ್ಲಿದ್ದರೂ ಅವು ನಮ್ಮ ತಳಿಗಳಿಗೆ ಸೂಕ್ತವಾಗುತ್ತಿಲ್ಲ. ಹೀಗಾಗಿ ಕೃಷಿ ಕಾರ್ಮಿಕರನ್ನೇ ಅವಲಂಬಿಸಬೇಕು. ಆದರೆ, ಹತ್ತಿ ಬಿಡಿಸಲು ಆಳು ಸಿಗದಿರುವುದು ಬಿತ್ತನೆ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ. - ಮಂಜುನಾಥ ಅಂತರವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net