

ಮೈಸೂರು: ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಮಾನದ ವಿರುದ್ಧ ಕಾವೇರಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಧರಣಿ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಪುರಭವನ ಬಳಿ ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ರಾಜ್ಯದ ಜಲಾಶಯಗಳಿ ಂದ ನೀರು ಹರಿಸುತ್ತಿರುವುದು ಖಂಡನೀಯ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ನಮ್ಮ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಮಿತಿ ಪದಾಧಿಕಾರಿಗಳಾದ ಮೂಗೂರು ನಂಜುಂಡಸ್ವಾಮಿ, ಎಂ.ಜೆ. ಸುರೇಶ್ ಗೌಡ , ತೇಜೇಶ್ ಲೋಕೇಶ್ ಗೌಡ, ಮಂಜುಳಾ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ರಮೇಶ್, ನೇಹಾ, ಸಿಂಧುವಳ್ಳಿ ಶಿವಕುಮಾರ್, ಆಟೋ ಮಹಾದೇವ ಹಾಗೂ ಇತರರು ಪಾಲ್ಗೊಂಡಿದ್ದರು.