ಧರ್ಮಸ್ಥಳದ ಬಗ್ಗೆ ಅಪಪ್ರಚಾರದ ವಿರುದ್ಧ ಸಾರ್ವಜನಿಕರಿಂದ ಸಹಿ ಸಂಗ್ರಹ

25 A
Published on

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದು ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯಿಂದ ನಗರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ನಡೆಯಿತು.

ನಗರದ ದೇವರಾಜ ಮಾರುಕಟ್ಟೆ ಬಳಿ ಸಹಿ ಸಂಗ್ರಹಿಸಿದ ಸಮಿತಿ ಪದಾಧಿಕಾರಿಗಳು, ಮುಖಂಡರು, ಧರ್ಮಸ್ಥಳದ ವಿಚಾರವಾಗಿ ಅನೇಕ ಪ್ರಕರಣಗಳನ್ನು ಧರ್ಮಾಧಿಕಾರಿ ಹಾಗೂ ಅವರ ಕುಟುಂಬವನ್ನು ತಳುಕು ಹಾಕುತ್ತಾ ಅಪ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.

ದಶಕದಿಂದ ಸೌಜನ್ಯಾ ಹತ್ಯೆ ಪ್ರಕರಣವಾಗಿ ಅನೇಕ ತನಿಖೆಗಳು ನಡೆದಿವೆ. ಆದರೆ ಎಲ್ಲಿಯೂ ಧರ್ಮಾಧಿಕಾರಿ ಅಥವಾ ಅವರ ಕುಟುಂಬದ ಯಾರೊಬ್ಬರ ಪಾತ್ರದ ಬಗ್ಗೆ ಸಾಕ್ಷಿ ಲಭಿಸಿಲ್ಲ. ಹೀಗಿದ್ದಾಗಿಯೂ ಮೇಲಿಂದ ಮೇಲೆ ಆರೋಪಗಳನ್ನು ಸೃಷ್ಟಿಸಿ ಅಪಪ್ರಚಾರವನ್ನು ಹೆಚ್ಚು ಮಾಡುತ್ತಿದ್ದಾರೆ ಎಂದು ದೂರಿದರು.

ಇದರಿಂದಾಗಿ ಆಸ್ತಿಕರ ಭಾವನೆಗೆ ನೋವುಂಟಾಗಿದೆ, ಮೂಲಭೂತವಾದಿ ಮತೀಯ ಸಂಘಟನೆಗಳು ತೆರೆಮರೆಯ ಹಿಂದೆ ಷಡ್ಯಂತ್ರ ರೂಪಿಸಿ ಕೆಲಸ ಮಾಡುತ್ತಿರುವುದು ಇದರಿಂದ ಗೊತ್ತಾಗುತ್ತದೆ. ಇಂತಹ ಷಡ್ಯಂತ್ರ ನಿಲ್ಲಬೇಕು. ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಶ್ರೀರಾಮಚಂದ್ರಾಪುರ ಮಠ, ಪೇಜಾವರ ಮಠ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶಬರಿಮಲೆ ಸೇರಿದಂತೆ ಅನೇಕ ಆಸ್ತಿಕರ ನಂಬಿಕೆಯ ಕ್ಷೇತ್ರಗಳ ಮೇಲೆ ಅಪಪ್ರಚಾರ ನಡೆಸಲಾಗಿದೆ. ಈಗ ಧರ್ಮಸ್ಥಳದ ಮೇಲೆ ಮುಗಿ ಬೀಳಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಈ ಅಪಪ್ರಚಾರವನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ವತಿಯಿಂದ ಮೈಸೂರಿನ ಚಿಕ್ಕ ಗಡಿಯಾರದ ವೃತ್ತದಲ್ಲಿ ಇಂದಿನಿಂದ ಸಹಿ ಸಂಗ್ರಹ ಚಳವಳಿಯನ್ನು ಆರಂಭಿಸಲಾಗಿದೆ.

ಮಾಜಿ ಮೇಯರ್ ಶಿವಕುಮಾರ್, ಹಿರಿಯ ವಕೀಲ ಸಿ.ವಿ. ಕೇಶವಮೂರ್ತಿ ಸೇರಿದಂತೆ ಸಾವಿರಾರು ಜನ ಸಹಿ ಹಾಕಿ ಚಳವಳಿಗೆ ಬೆಂಬಲ ಸೂಚಿಸಿದರು. ಮುಖಂಡರಾದ ಮೈ.ಕಾ. ಪ್ರೇಮ್ಕುಮಾರ್, ಸಂಜಯ್, ರಾಕೇಶ ಭಟ್, ಸಚಿನ್, ನಾಯಕ್, ಶ್ರೀಧರ್, ಚಿಕ್ಕವೆಂಕಟು, ಕುಮಾರ್, ಅನಿಲ್, ಪ್ರಮೋದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net