ಸಿಐಟಿಯುನಿಂದ ಸಹಿ ಸಂಗ್ರಹ ಅಭಿಯಾನ

4
Published on

ಮೈಸೂರು: ಶ್ರಮಜೀವಿಗಳ ಜೀವನಮಟ್ಟ ಸುಧಾರಿಸಿ, ದುಡಿಯುವ ಜನರ ಬದುಕನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ನಗರದ ಗನ್‌ಹೌಸ್‌ನಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದುಡಿಯುವ ಜನರ ಬದುಕು ದುಸ್ತರವಾಗಿದೆ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಶ್ರಮಿಕರಿಗೆ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ಸರ್ಕಾರಗಳ ಅವೈಜ್ಞಾನಿಕ ನೀತಿಗಳಿಂದಾಗಿ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಜನರ ಘನತೆಯ ಬದುಕು ಖಾತ್ರಿಗೊಳಿಸಬೇಕೆಂದು ಆಗ್ರಹಿಸಿದರು.

ಬೇಡಿಕೆಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ರೈತರಿಗೆ ಮಾರಕವಾಗಿರುವ ಕೃಷಿ ಕಾನೂನು ತಿದ್ದುಪಡಿ ಹಿಂಪಡೆದು, ಎಪಿಎಂಸಿ ಬಲಪಡಿಸಬೇಕು. ದೇಶದ ಸಂವಿಧಾನ ರಕ್ಷಿಸಿ, ಜನತೆಯ ಐಕ್ಯತೆ, ಸಾಮರಸ್ಯ ಕಾಪಾಡಬೇಕು. ವಿದ್ಯುತ್, ರೈಲ್ವೆ ಒಳಗೊಂಡಂತೆ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಬೇಕು. ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವ ಕಾನೂನು ಹಿಂಪಡೆಯಬೇಕು. ಕನಿಷ್ಠ ಕೂಲಿಯನ್ನು 31 ಸಾವಿರಕ್ಕೆ ಏರಿಕೆ ಮಾಡಬೇಕು. ಇಎಸ್‌ಐ, ಪಿಎಫ್, ಗ್ಯಾಚ್ಯುಯಿಟಿ, ಬೋನಸ್ ಕಾಯ್ದೆಯಲ್ಲಿ ವಿಧಿಸಲಾಗಿರುವ ಎಲ್ಲ ಮಿತಿಗಳನ್ನು ತೆಗೆದು ಹಾಕಬೇಕು. ಇಪಿಎಫ್ ನಿವೃತ್ತಿದಾರರಿಗೆ ಕನಿಷ್ಠ 10 ಸಾವಿರ ರೂ. ಪಿಂಚಣಿ ಹಾಗೂ ತುಟ್ಟಿಭತ್ಯೆ ನೀಡಬೇಕು. ಸ್ಕೀಂ ನೌಕರರನ್ನು ಐಎಲ್‌ಸಿ ತೀರ್ಮಾನದಂತೆ ಸರ್ಕಾರಿ ನೌಕರರೆಂದು ಪರಿಗಣಿಸಿ ಸೇವಾ ನಿಯಮ ರೂಪಿಸಬೇಕು. ಪಂಚಾಯಿತಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಹಾಗೂ ಇನ್ನಿತರ ಕಾನೂನುಬದ್ಧ ಸೌಲಭ್ಯ ನೀಡಬೇಕು. ನಿವೃತ್ತರಾದ ಬಿಸಿಯೂಟ ನೌಕರರಿಗೆ ಇಡುಗಂಟು ನೀಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮೀ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ್, ಜಿಲ್ಲಾಧ್ಯಕ್ಷ ಜಿ.ಜಯರಾಂ, ಕಾರ್ಯಾಧ್ಯಕ್ಷ ಎಚ್.ಎಸ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾವ್, ಖಜಾಂಚಿ ಎಂ.ಅಣ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net